ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ
ಬೆಂಗಳೂರು, ಮೇ 6: ಬೇಸಿಗೆ ಬಿಸಿಲ ಬೇಗೆಯಿಂದ ಬಸವಳಿದು-ಕಂಗೆಟ್ಟಿದ್ದ ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಜನತೆಗೆ ಶುಕ್ರವಾರ ಸಂಜೆ ದಿಢೀರನೆ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆ ತಂಪೆರೆದಿದೆ.
ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ ಆರಂಭವಾದ ಅಬ್ಬರದ ಗುಡುಗು ಸಹಿತ ಗಾಳಿ-ಮಳೆಯಿಂದ ಸಾರ್ವಜನಿಕರು, ನಿತ್ಯ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು ಹಾಗೂ ದಾರಿಹೋಕರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರಸ್ತೆ ಮತ್ತು ಚರಂಡಿಗಳು ಸಂಪೂರ್ಣ ಜಲಾವೃತವಾಗಿದ್ದವು.
ಶಾಂತಿನಗರ, ವಿಠ್ಠಲ್ ಮಲ್ಯ ರಸ್ತೆ, ಎಂ.ಜಿ.ರಸ್ತೆ, ಶಿವಾಜಿನಗರ, ಆರ್.ಟಿ. ನಗರ, ಯಲಹಂಕ, ಹೆಬ್ಬಾಳ, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಕೆ.ಆರ್. ಪುರಂ, ಮಡಿವಾಳ, ಎಲೆಕ್ಟ್ರಾನಿಕ್‌ಸಿಟಿ ಸೇರಿದಂತೆ ನಗರದಾದ್ಯಂತ ಭಾರೀ ಮಳೆ ಸುರಿದಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಜನರು ಪರದಾಡುವಂತಾಯಿತು.
ಸಂಜೆ 4.30ರ ಬಳಿಕ ದಿಢೀರ್ ಮಳೆ ಸುರಿದ ಪರಿಣಾಮ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆಲ್ಲ ನೀರು ತುಂಬಿ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂತು. ಕೆಲ ಬಡಾವಣೆಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದರಿಂದ ಮನೆಯವರೆಲ್ಲರೂ ಸೇರಿಕೊಂಡು ನೀರನ್ನು ಹೊರ ಚೆಲ್ಲುವ ಕೆಲಸ ಮಾಡಿದರು.
ಗಾಳಿ ಸಹಿತ ಮಳೆ ಸುರಿದಿದ್ದರಿಂದ ನಗರದ ವಿವಿಧ ಬಡಾವಣೆಗಳಲ್ಲಿ 25 ಮರಗಳು ಧರೆಗೆ ಉರುಳಿ ಬಿದ್ದಿದ್ದರಿಂದ ವಾಹನ ಸವಾರರು ರಸ್ತೆಯಲ್ಲಿಯೇ ವಾಹನಗಳ ಸಹಿತ ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು. ಮಾಹಿತಿ ಪಡೆದ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಧರೆಗೆ ಉರುಳಿದ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸಿಲಿಕಾನ್‌ಸಿಟಿಯಲ್ಲಿ ಸುರಿದ ಭಾರೀ ಮಳೆಗೆ 25 ಮರಗಳು ಧರೆಗುರುಳಿದ್ದು, ಬಿಬಿಎಂಪಿ ಸಿಬ್ಬಂದಿಯಿಂದ ಅವುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ನೀರು ತುಂಬಿದ ತಗ್ಗು ಪ್ರದೇಶಗಳಿಗೆ ವಾಟರ್ ಪಂಪ್‌ನ್ನು ಅಳವಡಿಸಿ ನೀರನ್ನು ಹೊರ ತೆಗೆಯಲಾಗುತ್ತಿದೆ. ಅಲ್ಲದೆ, ಮುಂದಿನ ಮುಂಗಾರು ಮಳೆ ಹೊತ್ತಿಗೆ ಚರಂಡಿಗಳ ದುರಸ್ತಿ ಕಾರ್ಯವನ್ನು ಮಾಡಿಸಲಾಗುತ್ತದೆ.