ಬರ ಪರಿಸ್ಥಿತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ : ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು.ಮೇ.7:ಬರ ಪರಿಸ್ಥಿತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದು, ಹಿಂದಿನ ಸರ್ಕಾರ ಬರ ನಿರ್ವಹಣೆಗೆ ತನ್ನ ಬೊಕ್ಕಸದಿಂದ ಬಿಡುಗಾಸು ಖರ್ಚು ಮಾಡಿರಲಿಲ್ಲ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಆಪಾದಿಸಿದರು.
ಬಿಜೆಪಿ ಸರ್ಕಾರದಲ್ಲಿ ಬರ ಪರಿಸ್ಥಿತಿ ನಿರ್ವಹಿಸಲು ಸಚಿವ ಸಂಪುಟ ಉಪ ಸಮಿತಿಯನ್ನೇ ರಚಿಸಿರಲಿಲ್ಲ. ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಲು ಒತ್ತು ಕೊಟ್ಟಿರಲಿಲ್ಲ. ಈಗ ರಾಜ್ಯ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಆವರಿಸಿರುವ ಬರಗಾಲದ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಇದುವರೆಗೆ ತನ್ನ ಬೊಕ್ಕಸದಿಂದ 548 ಕೋಟಿ ರೂಗಳನ್ನು ವೆಚ್ಚ ಮಾಡಿದೆ. ಇದುವರೆಗೆ ಕೇಂದ್ರದಿಂದ ನಮಗೆ 1856 ಕೋಟಿ ಬಂದಿದ್ದು ನಾವು ಕುಡಿಯುವ ನೀರು ಸೇರಿದಂತೆ ವಿವಿಧ ಪರಿಹಾರ ಕಾಮಗಾರಿಗಳಿಗಾಗಿ 548 ಕೋಟಿ ರೂ ಬಿಡುಗಡೆ ಮಾಡಿದ್ದೇವೆ ಎಂದರು.
ಬಿಜೆಪಿಯವರು ಇವತ್ತು ಬರಪರಿಹಾರ ಕಾಮಗಾರಿಯ ವಿಷಯ ಬಂದಾಗ ರಾಜಕೀಯ ಮಾಡುತ್ತಾರೆ. ಆದರೆ ಇವರು ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರ ಕೊಟ್ಟ ಹಣವನ್ನೂ ಸರಿಯಾಗಿ ವೆಚ್ಚ ಮಾಡುತ್ತಿರಲಿಲ್ಲ. ಬರಪರಿಹಾರವಿರಲಿ, ಅತಿವೃಷ್ಟಿಯಾಗಲಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಒಂದೇ ಒಂದು ಪೈಸೆಯನ್ನು ತನ್ನ ಬೊಕ್ಕಸದಿಂದ ಹಾಕದ ಬಿಜೆಪಿ ನಾಯಕರು ಇವತ್ತು ರಾಜ್ಯ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ 152 ತಾಲ್ಲೂಕುಗಳು ಬರಪೀಡಿತವಾಗಿದ್ದವು. ಆದರೆ ಆ ಸಂದರ್ಭದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಂಪುಟ ಉಪಸಮಿತಿ ಕಾಲ ಕಾಲಕ್ಕೆ ಸರಿಯಾಗಿ ಸಭೆ ಕೂಡಾ ಸೇರಿರಲಿಲ್ಲ.
ಆದರೆ ನಾವು ಪ್ರತಿ ವರ್ಷ ನಿಗದಿತ ಕಾಲಕ್ಕೆ ಸಂಪುಟ ಉಪಸಮಿತಿ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು ಈ ವರ್ಷ ಹನ್ನೆರಡು ಬಾರಿ ಸಭೆಗಳನ್ನು ನಡೆಸಿದ್ದೇವೆ ಎಂದು ಅವರು ವಿವರಿಸಿದರು.
ಇದೇ ರೀತಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಆರೆಂಟು ತಿಂಗಳ ಕಾಲ ಅದನ್ನು ಬಿಜೆಪಿ ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿರಲಿಲ್ಲ. ಆದರೆ ನಾವು ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 1540 ಕೋಟಿ ರೂಗಳ ಪೈಕಿ ಬಹುತೇಕ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಇನ್ನುಳಿದ ಬಾಕಿ ಹಣವನ್ನು ಒಂದು ವಾರದೊಳಗೆ ರೈತರ ಖಾತೆಗೆ ಜಮೆ ಮಾಡುತ್ತೇವೆ.ಉಳಿದಂತೆ ಕೇಂದ್ರ ಸರ್ಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿದ 723 ಕೋಟಿ ರೂಪಾಯಿಗಳಿನ್ನೂ ಬಂದಿಲ್ಲ.ಆದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರವನ್ನು ಸಿದ್ಧಪಡಿಸಿಟ್ಟುಕೊಳ್ಳಲು ಹೇಳಿದ್ದೇವೆ ಎಂದರು.
ಬರಪರಿಹಾರ ಕಾಮಗಾರಿಯನ್ನು ಈ ಸಲ ಸಮರೋಪಾದಿಯಲ್ಲಿ ಮಾಡಿದ್ದೇವೆ.ಹಿಂದೆಂದೂ ಈ ಮಟ್ಟದಲ್ಲಿ ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ಕೆಲಸವಾಗಿರಲಿಲ್ಲ.ಆದರೆ ನಾವು ಸಚಿವರು,ಅಧಿಕಾರಿಗಳು ಎಲ್ಲರೂ ರಾಜ್ಯಾದ್ಯಂತ ಸುತ್ತಿ ಪರಿಹಾರ ಕ್ರಮ ಕೈಗೊಂಡಿದ್ದೇವೆ.
ನಾವು ಬರಪರಿಹಾರ ಕಾಮಗಾರಿಗಾಗಿ 548 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದೇವೆ ಎಂದರೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರ ನೀಡಿದ ಹಣವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿದ್ದೇವೆ ಎಂದೇ ಅರ್ಥ.ಆದರೆ ನಾವು ಕೇವಲ 275 ಕೋಟಿ ರೂ ಬಿಡುಗಡೆ ಮಾಡಿದ್ದೇವೆ ಎಂಬುದು ಪ್ರತಿಪಕ್ಷಗಳ ನಿರಾಧಾರ ಆರೋಪ ಎಂದರು.