‘ಅನಕ್ಷರಸ್ಥರಿಗೆ ಕಾನೂನಿನ ಬಗೆ್ಗ ಅರಿವು ಮೂಡಲಿ: ಯಶವಂತ್ ಕುಮಾರ್
ಕಾರವಾರ, ಮೇ 7: ದೇಶದಲ್ಲಿರುವ ಬಹುತೇಕ ಅನಕ್ಷರಸ್ಥರು ಕಾನೂನನ್ನು ಸರಿಯಾಗಿ ತಿಳಿದುಕೊಳ್ಳದೆ ಮೋಸ ಹೋಗುತ್ತಿದ್ದು, ಅವರಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸಿ ಜಾಗೃತಗೊಳಿಸಲು ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು ಅದರ ನೆರವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ಪ್ರಭಾರ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಯಶವಂತ್ ಕುಮಾರ್ ಹೇಳಿದರು.
ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ಜರ್ನಲಿಸ್ಟ್ ಜಿಲ್ಲಾ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಮುದ್ರಣ ಹಕ್ಕು ಹಾಗೂ ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ಎಂಬುದು ಎಲ್ಲರಿಗೂ ಒಂದೇ. ನಮ್ಮ ಸಂವಿಧಾನದಲ್ಲಿರುವ ಸಂಪೂರ್ಣವಾಗಿ ಕಾನೂನನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ದಿನನಿತ್ಯದ ಚಟುವಟಿಕೆಗೆ ಅಗತ್ಯವಾದ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ನಮ್ಮ ಸಮಸ್ಯೆಗಳ ಸತ್ಯಾಸತ್ಯತೆ ತಿಳಿದುಕೊಳ್ಳಬಹುದು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಎಲ್ಲ ವ್ಯವಸ್ಥೆಗಳಲ್ಲೂ ಒಂದು ಕಾನೂನು ಎನ್ನುವುದು ಇರುತ್ತದೆ ಎಂದರು.
ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ಪುಸ್ತಕಗಳನ್ನು ಬರೆದರೆ ಸಾಲದು. ಅದನ್ನು ಗ್ರಂಥಸ್ವಾಮ್ಯ ವಿಭಾಗದಲ್ಲಿ ರಿಜಿಸ್ಟರ್ ಮಾಡಬೇಕು. ಎಷ್ಟೋ ಜನರಿಗೆ ಈ ವಿಷಯ ತಿಳಿದಿಲ್ಲ. ಪುಸ್ತಕದಿಂದ ಬೌದ್ಧಿಕ ಮಟ್ಟ ಏರುತ್ತದೆ. ಅಲ್ಲದೆ ಗ್ರಂಥಾಲಯಗಳಲ್ಲಿ ಸ್ಥಳೀಯ ಹಾಗೂ ಪ್ರಸಿದ್ದ ಬರಹಗಾರರ ಪುಸ್ತಕಗಳು ಲಭ್ಯವಾಗಬೇಕು. ಪುಸ್ತಕಗಳನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕು. ಅಂದಾಗ ಓದುಗರ ಸಂಖ್ಯೆ ಹೆಚ್ಚುತ್ತದೆ. ಆಧುನಿಕ ತಂತ್ರಜ್ಞಾನಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಿಂದ ಮಾಹಿತಿ ಸಿಗುತ್ತದೆಯೇ ವಿನಃ ಜ್ಞ್ಞಾನ ಹೆಚ್ಚಾಗುವುದಿಲ್ಲ ಎಂದರು.
ನ್ಯಾಯವಾದಿ ಎಸ್.ಆರ್.ಕೌಶಿಕ್ ಮಾತನಾಡಿ, ಕಾನೂನುಗಳು ನಮ್ಮ ಒಳಿತಿಗಿವೆ. ಅವುಗಳ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪುಸ್ತಕಗಳ ವಿಷಯಕ್ಕೆ ಬಂದರೆ ಲೇಖಕನಿಗೆ ಪುಸ್ತಕದ ಮೇಲೆ ಕಾಪಿ ರೈಟ್ ಇದೆ. ಒಬ್ಬ ಸಾಹಿತಿ ಬರೆದ ಪುಸ್ತಕವನ್ನು ಬೇರೆ ಯಾರಾದರೂ ಕದ್ದರೆ ಅವರ ಮೇಲೆ ಕಾನೂನುಕ್ರಮ ಜರಗಿಸಲು ಅವಕಾಶವಿದೆ. ವಸ್ತುಗಳ ಉತ್ಪಾದನೆ, ಅವುಗಳ ಮೇಲಿನ ಡಿಸೈನ್‌ಗೆ ಕೂಡ ಕಾನೂನು ಇದೆ. ಒಂದು ಕಂಪೆನಿಯಿಂದ ವಸ್ತು ತಯಾರಾದ 15 ವರ್ಷಗಳವರೆಗೆ ಅದರ ಮೇಲಿನ ಹಕ್ಕು ಆ ಕಂಪೆನಿಗೆ ಇರುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಮಹೇಶ್ ಚಂದ್ರಕಾಂತ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ವಿ. ನಾಯ್ಕ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ತಾಲೂಕು ಅಧ್ಯಕ್ಷ ನಾಗರಾಜ ಉಪಸ್ಥಿತರಿದ್ದರು.