×
Ad

ಶಿವಮೊಗ್ಗ ಮನಾಪ ಕಾರ್ಪೊರೇಟರ್‌ಗಳ ಆಕ್ಷೇಪ!

Update: 2016-05-07 22:01 IST

<ಬಿ. ರೇಣುಕೇಶ್

ಶಿವಮೊಗ್ಗ, ಮೇ 7: ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಉಪಗ್ರಹ ಆಧಾರಿತ ನಗರ ಆಸ್ತಿ ಮಾಲಕತ್ವ ಯೋಜನೆ (ಯುಪಿಓಆರ್) ಅನುಷ್ಠಾನಗೊಳಿಸಲಾಗಿದೆ. ಪ್ರತಿಯೊಂದು ಸ್ಥಿರಾಸ್ತಿಯ ಸರ್ವೆ ನಡೆಸಿ, ಸಂಬಂಧಿಸಿದ ಮಾಲಕರಿಗೆ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ನೀಡಲಾಗುತ್ತಿದೆ. ಕಳೆದ ಸರಿಸುಮಾರು ಒಂದೂವರೆ ವರ್ಷದ ಹಿಂದೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಸ್ಥಿರಾಸ್ತಿ ಮಾಲಕರು ಪಿ.ಆರ್.ಕಾರ್ಡ್ ಪಡೆಯುವುದು ಕಡ್ಡಾಯವಾಗಿದೆ. ಈಗಾಗಲೇ ಈ ಯೋಜನೆಯ ಬಗ್ಗೆ ಶಿವಮೊಗ್ಗ ನಾಗರಿಕರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಹಿಂದೆ ಸ್ಥಿರಾಸ್ತಿ ನೊಂದಣಿಗೆ ಪಿ.ಆರ್.ಕಾರ್ಡ್ ಕಡ್ಡಾಯ ಆದೇಶ ಜಾರಿಗೊಳಿಸಿದ್ದಾಗ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರಿಂದ ರಾಜ್ಯ ಸರಕಾರ ಕಡ್ಡಾಯ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿತ್ತು. ಆದರೆ ಕಳೆದ ಕೆಲ ತಿಂಗಳ ಹಿಂದೆ ಸ್ಥಿರಾಸ್ತಿ ನೋಂದಣಿಗೆ ಮತ್ತೆ ಪಿ.ಆರ್.ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಪ್ರಸ್ತುತ ಸರ್ವೆ ಇಲಾಖೆಯು ಶಿವಮೊಗ್ಗ ನಗರದಲ್ಲಿ 93 ಸ್ಥಿರಾಸ್ತಿಗಳ ಸರ್ವೆ ನಡೆಸಿದೆ. ಇಲ್ಲಿಯವರೆಗೂ ಪಿ.ಆರ್.ಕಾರ್ಡ್ ಕೋರಿ 53 ಸಾವಿರ ಸ್ಥಿರಾಸ್ತಿ ಮಾಲಕರು ಯುಪಿಓಆರ್ ಕಚೇರಿಗೆ ದಾಖಲೆ ಸಲ್ಲಿಸಿದ್ದು, 23 ಸಾವಿರ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಉಳಿದ ಸುಮಾರು 44 ಸಾವಿರ ಸ್ಥಿರಾಸ್ತಿ ಮಾಲಕರು ಇಲ್ಲಿಯವರೆಗೂ ದಾಖಲೆ ಸಲ್ಲಿಸಿಲ್ಲ. ಈ ನಡುವೆ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮನೀಶ್ ವೌದ್ಗಿಲ್‌ರವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಶಿವಮೊಗ್ಗ ನಗರದ ಪ್ರತಿಯೋರ್ವ ಸ್ಥಿರಾಸ್ತಿ ಮಾಲಕರು ಪಿ.ಆರ್.ಕಾರ್ಡ್ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು. ಒಂದು ವೇಳೆ ಕಾಲಮಿತಿಯೊಳಗೆ ದಾಖಲೆ ಸಲ್ಲಿಸದಿದ್ದರೆ ಅಂತಹ ಸ್ಥಿರಾಸ್ತಿಯನ್ನು ಸರಕಾರಿ ಆಸ್ತಿಎಂದು ಘೋಷಣೆ ಮಾಡಲಾಗುವುದು ಎಂದು ಘೋಷಿಸಿದ್ದರು. ಇದೇ ವೇಳೆ ಪಿ.ಆರ್.ಕಾರ್ಡ್ ಕಡ್ಡಾಯ ಆದೇಶದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೋರೇಟರ್‌ಗಳ ವಿರುದ್ಧವೂ ಪರೋಕ್ಷ ಚಾಟಿ ಬೀಸಿದ್ದರು. ಮುನಿಸಿಪಾಲಿಟಿಯವರು ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಮೂಲಸೌಕರ್ಯ ಕಲ್ಪಿಸುವತ್ತ ಗಮನಹರಿಸಬೇಕು. ಪಿ.ಆರ್.ಕಾರ್ಡ್ ವಿಷಯದಲ್ಲಿ ಅವರು ಮಧ್ಯಪ್ರವೇಶಿಸುವುದು ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

 ಮನೀಶ್‌ವೌದ್ಗಿಲ್‌ರವರ ಈ ಹೇಳಿಕೆಯನ್ನು ಖಂಡಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಕೆಲ ಕಾರ್ಪೊರೇಟರ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮಿಂದ ನೀತಿ ಪಾಠದ ಅಗತ್ಯವಿಲ್ಲ... ಬಾಯಿಗೆ ಬಂದಂತೆ ಮಾತನಾಡಬೇಡಿ. ರಾಜ್ಯದ ಇತರೆಡೆಯೂ ಯೋಜನೆ ಅನುಷ್ಠಾನ ಮಾಡುವುದಾಗಿ ಹೇಳಿದ್ದ ನೀವು, ಬರೀ ಶಿವಮೊಗ್ಗದಲ್ಲಿ ಮಾತ್ರ ಅನುಷ್ಠಾನ ಮಾಡಿ ಜನರಿಗೆ ತೊಂದರೆ ಕೊಡುತ್ತಿರುವುದೇಕೆ... ನಿಮ್ಮ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುವುದಿಲ್ಲವೆ...ಎಂಬಿತ್ಯಾದಿಯಾಗಿ ವಾಗ್ದಾಳಿ ನಡೆಸಿದ್ದಾರೆ. ಮನೀಶ್‌ರವರ ಹೇಳಿಕೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಕೆಲ ಕಾರ್ಪೋರೇಟರ್‌ಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಈ ಮುಂದಿನಂತಿದೆ. ನಾಗರಿಕರ ಪರ ಮಾತನಾಡಲು ನಿಮ್ಮ ಅನುಮತಿ ಬೇಕಿಲ್ಲ: ಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ದಲ್ಲಿ ಪಿ.ಆರ್.ಕಾರ್ಡ್ ಕಡ್ಡಾಯ ಆದೇಶ ಹೊರಡಿ ಸಲಾಗಿದೆ. ಇದರಿಂದ ಸ್ಥಳೀಯ ನಾಗರಿಕರು ನಾನಾ ರೀತಿಯ ಸಮಸ್ಯೆ ಎದುರಿ ಸುತ್ತಿದ್ದಾರೆ. ಈ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಸದಸ್ಯರೆಲ್ಲರೂ ಪಕ್ಷಭೇದ ಮರೆತು ಪಿ.ಆರ್.ಕಾರ್ಡ್ ಅವ್ಯವಸ್ಥಿತ ಅನುಷ್ಠಾನದ ಬಗ್ಗೆ ಟೀಕಿಸಿದ್ದೇವೆ. ನಗರದ ನಾಗರಿಕರ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದರಲ್ಲಿ ಯಾವ ತಪ್ಪಿದೆ. ಯಾವ ವಿಷಯದ ಬಗ್ಗೆ ಮಾತನಾಡಬೇಕು. ಮಾತನಾಡಬಾರದು ಎಂಬ ಸಾಮಾನ್ಯ ಜ್ಞಾನವಿದೆ. ಇದನ್ನು ನಿಮ್ಮಿಂದ ಕಲಿತು ಕೊಳ್ಳಬೇಕಾಗಿಲ್ಲ ಎಂದು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಕ್ಷೇತರ ಸದಸ್ಯ ಐಡಿಯಲ್ ಗೋಪಿ ಮನೀಶ್ ವೌದ್ಗಿಲ್‌ಗೆ ತಿರುಗೇಟು ನೀಡಿದ್ದಾರೆ. ಐಡಿಯಲ್ ಗೋಪಿ

ನಿಮ್ಮಿಂದ ಜನರಿಗೆ ತೊಂದರೆ :  ಕಾರ್ಪೋರೇಟರ್‌ಗಳು ಜನರು ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದರೆ ಅದು ರಿಯಲ್ ಎಸ್ಟೇಟ್ ವ್ಯವಹಾರವಾಗುತ್ತದೆಯೇ? ಪಿ.ಆರ್.ಕಾರ್ಡ್‌ನಿಂದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಅರಿವು ನಿಮಗಿದೆಯೇ ? ನಿಮ್ಮ ಇಲಾಖೆಯವರು ನಾಗರಿಕರಿಗೆ ಈ ಕುರಿತಂತೆ ಸ್ಪಷ್ಟ ಮಾಹಿತಿ ನೀಡಿದ್ದಾರಾ? ಮೊದಲು ನಿಮ್ಮಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಪಿ.ಆರ್.ಕಾರ್ಡ್ ವಿಷಯದಲ್ಲಿ ಮೂಗು ತೂರಿಸಬೇಡಿ ಎಂದು ಪಾಲಿಕೆ ಸದಸ್ಯರಿಗೆ ಸಲಹೆ ನೀಡುವ ಅಗತ್ಯವಿಲ್ಲ ಎಂದು ಜೆಡಿಎಸ್ ಸದಸ್ಯ, ಮಾಜಿ ಉಪ ಮೇಯರ್ ಎಚ್. ಪಾಲಾಕ್ಷಿಯವರು ಮನೀಶ್ ವೌದ್ಗಿಲ್ ಹೇಳಿಕೆಗೆ ಕಿಡಿಕಾರಿದ್ದಾರೆ. ಎಚ್. ಪಾಲಾಕ್ಷಿ

ನಿಮ್ಮಿಂದಾಗುತ್ತಿರುವ ತಪ್ಪುಸರಿಪಡಿಸಿಕೊಳ್ಳಿ: ಪಿ.ಆರ್.ಕಾರ್ಡ್ ಬಗ್ಗೆ ಕಾರ್ಪೊರೇಟರ್‌ಗಳು ಮಾತ ನಾಡುವ ಅಗತ್ಯ ವಿಲ್ಲ. ಇದು ಅವರಿಗೆ ಸಂಬಂಧಿಸಿದ ವಿಷಯವಲ್ಲ, ಮೂಗು ತೂರಿಸಬೇಡಿ ಎಂದಿರುವ ಮನೀಶ್ ವೌದ್ಗಿಲ್‌ರವರ ಹೇಳಿಕೆ ಖಂಡನೀಯ. ನಗರದ ನಾಗರಿಕ ರಿಂದ ಆಯ್ಕೆಯಾಗಿ ಬಂದಿರುವ ನಾವು ನಾಗರಿಕರ ಸಮಸ್ಯೆಯ ಬಗ್ಗೆ ಮಾತನಾಡದಿದ್ದರೆ, ಇನ್ಯಾರು ಮಾತ ನಾಡಬೇಕು. ಅದೇ ರೀತಿಯಲ್ಲಿ ಪಿ.ಆರ್.ಕಾರ್ಡ್‌ನಿಂದ ನಾಗರಿಕರು ಎದುರಿ ಸುತ್ತಿರುವ ಸಮಸ್ಯೆಗಳ ಬಗ್ಗೆ ಕಾರ್ಪೊರೇಟರ್‌ಗಳು ಮಾತ ನಾಡಿ ದ್ದೇವೆ. ಮುಂದೆಯೂ ಮಾತ ನಾಡುತ್ತೇವೆ ಎಚ್.ಸಿ.ಮಾಲತೇಶ್ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ: ಪ್ಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರೇ ಪ್ರಭುಗಳು. ಅಧಿಕಾರಿಗಳು, ಜನಪ್ರತಿನಿಧಿಗಳೆಲ್ಲರೂ ಅವರ ಸೇವೆಗೆ ನಿಯೋಜಿತರಾಗಿದ್ದೆವೆ ಎಂಬುವುದನ್ನು ಮೊದಲು ಅವರು ಅರಿತುಕೊಳ್ಳಬೇಕಾಗಿದೆ. ಪಿ.ಆರ್.ಕಾರ್ಡ್‌ಗೆ ದಾಖಲೆ ಸಲ್ಲಿಸದ ಸ್ಥಿರಾಸ್ತಿಗಳನ್ನು ಸರಕಾರಿ ಆಸ್ತಿಯಾಗಿ ಘೋಷಣೆ ಮಾಡುತ್ತೆವೆ ಎಂಬ ಮನೀಶ್‌ರವರ ಹೇಳಿಕೆ ಜನವಿರೋಧಿಯಾದುದಾಗಿದೆ. ನಾಗರಿಕರ ಹಿತಾಸಕ್ತಿಗೆ ವಿರುದ್ಧವಾದುದಾಗಿದೆ ಎಂದು ಕಿಡಿಕಾರಿರುವ ನಗರ ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ, ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ನಾವುಗಳು ಸೂಕ್ತ ವೇದಿಕೆಗಳಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸುವ ಗುರುತರ ಜವಾಬ್ದಾರಿಯಿದೆ. ನಾಗರಾಜ್ ಕಂಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News