ಹಾರಂಗಿ ಬಲದಂಡೆ ಅಭಿವೃದ್ಧಿಗೆ ಶೀಘ್ರ ಚಾಲನೆ: ಸಚಿವ ದಿನೇಶ್ ಗುಂಡೂರಾವ್
ಮಡಿಕೇರಿ, ಮೇ 7 : ಹಾರಂಗಿ ಜಲಾಶಯದ ಬಲದಂಡೆ ಯೋಜನೆಯನ್ನು 73 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೂಡಲೇ ಟೆಂಡರ್ ಕರೆಯಲು ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹಾರಂಗಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿಯ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಹಾರಂಗಿ ಜಲಾಶಯದ ಎಡದಂಡೆ ಯೋಜನೆಯನ್ನು ಎರಡನೇ ಹಂತದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ ಬಲದಂಡೆ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಎಡ ಮತ್ತು ಬಲದಂಡೆ ನೀರಾವರಿ ಯೋಜನೆಗಳು ಪ್ರಮುಖವಾಗಿದ್ದು, ಇವುಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಆ ನಿಟ್ಟಿನಲ್ಲಿ ಮುಂದಿನ ಬೋರ್ಡ್ ಸಭೆಯಲ್ಲಿ ಎಡದಂಡೆ ಯೋಜನೆಗೆ ಅನುಮತಿ ಪಡೆದು ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು. ಭಾಗಮಂಡಲದಲ್ಲಿ ಮೇಲುಸೇತುವೆ ನಿರ್ಮಾಣ ಸಂಬಂಧ ಈಗಾ ಗಲೇ 24 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿ ಸಲಾಗಿದೆ. ಇದನ್ನು ಮುಂದಿನ ಬೋರ್ಡ್ ಸಭೆಯಲ್ಲಿ ಅನುಮತಿ ಪಡೆದು ಕಾಮಗಾರಿಯನ್ನು ಆರಂಭಿ ಸಲು ಕ್ರಮಕೈ ಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಹಾರಂಗಿ ಬಳಿಯ ಯಡವನಾಡು ರಸ್ತೆ ಕಾಮಗಾರಿಯನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು. ಹುಣಸೂರು ತಾಲೂಕಿನ ಹನಗೋಡು ನಾಲೆ ಅಭಿವೃದ್ಧಿಗೆ 135 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಹಾರಂಗಿ ಜಲಾಶಯ ಬಳಿ 4 ಕೋಟಿ ರೂ. ವೆಚ್ಚದಲ್ಲಿ ಸರ್ಕ್ಯೂಟ್ ಹೌಸ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸರ್ಕಾರಕ್ಕೆ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು. ಒಟ್ಟಾರೆ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಆರಂಭಕ್ಕೆ ಮುಂದಿನ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಚಾಲನೆ ನೀಡಲಾಗುವುದು ಎಂದು ಭರವಸೆ ನುಡಿದರು.
ರಾಜ್ಯದಲ್ಲಿ ಸಕ್ಕರೆ ಬೆಲೆ ಹೆಚ್ಚಳ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸದ್ಯ 13.50 ರೂ.ನಿಂದ 15 ರೂ.ಗೆ ಹೆಚ್ಚಿಸಲಾಗಿದೆ. ಈ ಸಂಬಂಧ ಟೆಂಡರ್ ಕರೆಯಲಾಗಿದೆ. ಸರಕಾರಕ್ಕೆ 36 ರೂ. ವೆಚ್ಚದಲ್ಲಿ ಸಕ್ಕರೆ ಲಭ್ಯವಾಗಲಿದೆ. ಪಡಿತರ ವ್ಯವಸ್ಥೆಯಡಿ 15 ರೂ. ನಲ್ಲಿ ಸಕ್ಕರೆಯನ್ನು ವಿತರಣೆ ಮಾಡಲಾಗುವುದು ಎಂದು ಇದೇ ಸಂದರ್ಭ ಮಾಹಿತಿ ನೀಡಿದರು. ಸಲಹಾ ಸಮಿತಿ ಸಭೆಯಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಹಾರಂಗಿ ಜಲಾಶಯದ ಮುಖ್ಯ ಇಂಜಿನಿಯರ್ ಶಿವಶಂಕರ, ಸೂಪರಿಂಡೆಂಟ್ ಎಂಜಿನಿಯರ್ ಮಹೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ.ಸಿಇಓ ಚಾರುಲತಾ ಸೋಮಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ತಹಶೀಲ್ದಾರ್ ಶಿವಪ್ಪ, ನೀರಾವರಿ ಇಲಾಖೆ ಇಂಜಿನಿಯರ್‌ಗಳು ಮತ್ತಿತರರು ಹಾಜರಿದ್ದರು.
ಜೂನ್ 17 ರ ಬಳಿಕ ಹಾರಂಗಿಗೆ ಪ್ರವೇಶ
ಹಾರಂಗಿ ಉದ್ಯಾನವನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿದ್ದು, ಕೃಷ್ಣರಾಜ ಸಾಗರ ಉದ್ಯಾನವನ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಮುಂದಿನ ಜೂನ್ 17 ರ ನಂತರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹಾರಂಗಿ ಜಲಾಶಯ ಎಂಜಿನಿಯರ್ ಭರವಸೆ ನೀಡಿದ್ದಾರೆ. ಈ ಸಂಬಂಧ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
< ಸಚಿವ ದಿನೇಶ್ ಗುಂಡೂರಾವ್