×
Ad

ಮೂಲ ಸಂಸ್ಕೃತಿ ಉಳಿಸಲು ಸಚಿವ ದಿನೇಶ್ ಗುಂಡೂರಾವ್ ಕರೆ

Update: 2016-05-07 22:04 IST

ಮಡಿಕೇರಿ, ಮೇ 7: ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೆ ಕೊಡವ ಭಾಷಾ ಸಂಸ್ಕೃತಿಯ ಬೆಳವಣಿಗೆಗೂ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ದಿನೆೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

ಅವರು ನಗರದ ಅರಸುಭವನದಲ್ಲಿ ನಡೆದ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಸಚಿವರು ಮತ್ತು ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕೊಡವ ಭಾಷಿಕ 18 ಉಪಜಾತಿಗಳ ಫಲಾನುಭವಿಗಳಿಗೆ ಸಾಂಪ್ರದಾಯಿಕ ವಾದ್ಯ ಪರಿಕರಗಳನ್ನು ವಿತರಿಸಿದರು.

ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಭಾರತದ ಜನಸಂಖ್ಯೆಗೆ ಹೋಲಿಸಿದಲ್ಲಿ ಕೊಡವ ಸಮುದಾಯ ಅತ್ಯಂತ ಸಣ್ಣ ಜನಾಂಗವಾಗಿದೆ. ಇಂತಹ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗಳನ್ನು ಸಂರಕ್ಷಿಸುವ ಮತ್ತು ಕೊಡವ ಸಮುದಾಯವನ್ನು ಸಂಘಟಿಸುವ ಕೆಲಸವಾಗಬೇಕಾಗಿದೆ ಎಂದರು. ಕೊಡವ ಮತ್ತು ಅರೆಭಾಷಾ ಅಕಾಡಮಿಗಳು ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ಸರಕಾರ ಹೆಚ್ಚಿನ ಸಹಕಾರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡವ ಭಾಷಾ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ 18 ಮೂಲ ನಿವಾಸಿ ಸಮುದಾಯಗಳನ್ನು ಒಟ್ಟಾಗಿ ಸೇರಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಮುನ್ನಡೆದಾಗ ಮಾತ್ರ ಈ ನೆಲದ ಸಂಸ್ಕೃತಿಯ ಉಳಿವು ಸಾಧ್ಯವೆಂದರು. ಕೊಡವ ಭಾಷೆಯನ್ನಾಡುವ ವಿವಿಧ ಮೂಲ ನಿವಾಸಿಗಳು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗೂ ಶ್ರಮಿಸುವಂತೆ ಕರೆ ನೀಡಿದರು.

*ನಿವೃತ್ತ ಭಾವಿಕಟ್ಟಿಗೆ ಸನ್ಮಾನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾಗಿ, ಕೊಡವ ಅಕಾಡಮಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಸ್.ಐ.ಭಾವಿಕಟ್ಟಿ ಅವರನ್ನು ಸಚಿವ ಮತ್ತು ಶಾಸಕರು ಸನ್ಮಾನಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕೊಡವ ಸಾಹಿತ್ಯ ಅಕಾಡಮಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಅಕಾಡಮಿಯಿಂದ ಇದೇ ಪ್ರಥಮ ಬಾರಿಗೆ ಈ ನೆಲದ ಸಂಸ್ಕೃತಿಯ ಸಂಬಂಧಿಸಿದ ಪರಿಕರಗಳನ್ನು ವಿತರಿಸುತ್ತಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಕರಕುಶಲ ನಿಗಮದ ಅಧ್ಯಕ್ಷರಾದ ವೀಣಾ ಅಚ್ಚಯ್ಯ, ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.

 ಸಾಂಪ್ರದಾಯಿಕ ಪರಿಕರ ವಿತರಣೆ: ಅಕಾಡಮಿ ವತಿಯಿಂದ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಡೆದ ಆಟ್‌ಪಾಟ್ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ತಲಾ 70 ಕುಪ್ಯ ಮತ್ತು ಚ್ಯಾಲೆಯನ್ನು, ಉಮ್ಮತ್ತಾಟ್‌ನಲ್ಲಿ ಧರಿಸುವ 120 ಸೀರೆಗಳನ್ನು, ಮಲೆಯ, ಬಣ್ಣ, ಪಣಿಕ, ಮಲಿಯ ಸಮುದಾಯದ ತಂಡಗಳಿಗೆ ವಾದ್ಯ ಪರಿಕರಗಳನ್ನು ವಿತರಿಸಲಾಯಿತು. ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ಕೊಡವ ಭಾಷಿಕ ಜನಾಂಗಗಳಿಗೆ ಸಾಂಪ್ರದಾಯಿಕ ಪರಿಕರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News