×
Ad

ಮಹಿಳೆಯರು ಸಮಾಜದಲ್ಲಿ ಕ್ರಿಯಾಶೀಲರಾಗಲಿ: ಕಾಗೋಡು ತಿಮ್ಮಪ್ಪ

Update: 2016-05-07 22:08 IST

ಸಾಗರ, ಮೇ 7: ನಾವು 21ನೆ ಶತಮಾನದಲ್ಲಿದ್ದೇವೆ. ಬದಲಾದ ದಿನಮಾನಕ್ಕೆ ತಕ್ಕಂತೆ ನಮ್ಮ ಕಾರ್ಯಚಟುವಟಿಕೆ, ಕೆಲಸ ಮಾಡುವ ವಿಧಾನ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನು ಗಿಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರು ಚಿಂತನೆ ನಡೆಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ಸಾಗರ ಟೌನ್ ಮಹಿಳಾ ಸಮಾಜದ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಸಂದರ್ಭದಲ್ಲಿ ಹೊರ ತಂದಿರುವ ‘ಅಮೃತ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿಯನ್ನು ರಾಜಕೀಯ ಕ್ಷೇತ್ರದಲ್ಲಿ ನೀಡಲಾಗಿದೆ. ಆದರೆ ಪುರುಷಪ್ರಧಾನ ಸಮಾಜ ಅದನ್ನು ಒಪ್ಪಿಕೊಳ್ಳಲು ಎಲ್ಲೋ ಹಿಂದೇಟು ಹಾಕುತ್ತಿದೆ. ಗ್ರಾಪಂಗೆ ಮಹಿಳೆಯರಿಗೆ ಅಧ್ಯಕ್ಷಸ್ಥಾನ ಸಿಕ್ಕರೆ ಅವರ ಪತಿ ಅಧಿಕಾರ ಚಲಾಯಿಸಿ, ಮಹಿಳೆಯರನ್ನು ನಾಲ್ಕುಗೋಡೆಗಳಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಾನೆ. ಮಹಿಳೆಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ತಮಗೆ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಮಹಿಳಾ ಸಮಾಜದಲ್ಲಿ ಇನ್ನಷ್ಟು ಕ್ರಿಯಾಶೀಲ ಚಟುವಟಿಕೆ ನಡೆಸಬೇಕು. ಮಹಿಳಾ ಸಮಾಜವೊಂದು 75 ವರ್ಷ ಪೂರೈಸಿರುವುದು ನಿಜಕ್ಕೂ ಆಶಾದಾಯಕ ಸಂಗತಿ. ಅದೇ ರೀತಿ ಅನೇಕ ಮಹಿಳಾ ಸಾಧಕರ ಸಾಧನೆ ನಮ್ಮ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು ಎಂದು ಸೂಚಿಸಿದ ಕಾಗೋಡು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಹಿರಿಯರಾದ ಬಿ.ವಿ. ಪ್ರಮೀಳಮ್ಮ, ಆರ್.ಜಿ.ಸುನಂದಾ, ಆರ್.ಜಿ.ಪ್ರಮೀಳಮ್ಮ, ಸುನಂದಾ ಶಶಿಭೂಷಣ್, ಗಿರಿಜಮ್ಮ, ಶಾಂತಲಕ್ಷ್ಮೀ, ಚೂಡಾಮಣಿ ರಾಮಚಂದ್ರ, ರತ್ನಾ ಇಂದೂಧರ, ಶಾಂತಾ ಶಂಕರನಾರಾಯಣ್, ದೀಪಾ ಕಾಗೋಡು, ಶೋಭಾ ಲಂಬೋಧರ್, ಪುಷ್ಪಾ ಮಲ್ಲಿಕಾರ್ಜುನ್, ಸುನಿತಮ್ಮ ಬಿ.ರಾವ್, ಸುಲೋಚನಮ್ಮ ಗೋಜನೂರು ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News