‘ಜಾಹೀರಾತಿನಲ್ಲಿ ಭಾರತ ಸೇವಾದಳದ ಧ್ಯೇಯೋದ್ದೇಶವನ್ನೂ ಪ್ರಕಟಿಸಿ: ಮಾಜಿ ಶಾಸಕ ಐ.ಬಿ.ಶಂಕರ್
ಚಿಕ್ಕಮಗಳೂರು, ಮೇ 7: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಲಾಗುವ ತಿಂಗಳ ತಿರುಳು ಪತ್ರಿಕಾ ಜಾಹೀರಾತಿನಲ್ಲಿ ಭಾರತ ಸೇವಾದಳದ ಧ್ಯೇಯೋದ್ದೇಶವನ್ನೂ ಪ್ರಕಟಿಸಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಒತ್ತಾಯಿಸಿದ್ದಾರೆ.
ಶನಿವಾರ ನಗರದ ಆಝಾದ್ ಪಾರ್ಕ್ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸೇವಾದಳ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಬಹುದೊಡ್ಡ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರ ಪ್ರೇಮವನ್ನು ನಿರಂತರವಾಗಿ ಬೆಳೆಸುತ್ತಿದೆ. ಇಂತಹ ಮಾತೃ ಸಂಸ್ಥೆಯ ಬಗ್ಗೆ ತಿಂಗಳ ತಿರುಳು ಜಾಹೀರಾತಿನಲ್ಲಿ ಪ್ರಕಟಿಸದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅತ್ಯಂತ ಸರಳ ವ್ಯಕ್ತಿ ಹಾಗೂ ಅಪ್ರತಿಮ ದೇಶಭಕ್ತ ರಾಗಿದ್ದು ಪ್ರತಿ ಕೆಲಸವನ್ನೂ ಅವರಿವರ ಮೇಲೆ ಹೊರಿಸದೆ ಸ್ವತಃ ತಾವೇ ಮಾಡಿಕೊಳ್ಳುತ್ತಿದ್ದರು. ಇಂತಹ ಮಹಾನ್ ದೇಶಭಕ್ತನ ಸರಳತೆ, ಶಿಸ್ತು ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದೇ ನಾವು ಅವರಿಗೆ ನೀಡಬಹುದಾದ ಗೌರವ ಎಂದರು.
ಭಾರತ ಸೇವಾದಳದ ತಾಲೂಕು ಸಂಘಟಕ ಕಾರ್ಯಕ್ರಮದ ರೂವಾರಿ ಎಸ್.ಇ.ಲೋಕೇಶ್ವರಾ ಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು.
ಹರ್ಡಿಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಮೂಕ್ತಿಹಳ್ಳಿ ಶಾಲೆಯ ಶಿಕ್ಷಕ ವಾಸುದೇವರಾಜ ಅರಸ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶ್ ಆಚಾರ್‌ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂಪಯ್ಯ, ತಾಲೂಕು ಕಾರ್ಯದರ್ಶಿ ಬಸವರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಮಹೇಶ್ವರಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದೇಗೌಡ ಉಪಸ್ಥಿತರಿದ್ದರು.