×
Ad

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಿಪಿಎಲ್ ಕಾರ್ಡ್

Update: 2016-05-08 22:08 IST

ಮಡಿಕೇರಿ, ಮೇ 8: ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕತೆರ್ಯರು ಹಾಗೂ ಸಹಾಯಕಿಯರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

 ನಗರದ ಕಾವೇರಿ ಕ್ಷೇತ್ರದಲ್ಲಿ ನಡೆದ ಜಿಲ್ಲಾ ಅಂಗನವಾಡಿ ಕಾರ್ಯಕತೆರ್ಯರು ಮತ್ತು ಸಹಾಯಕಿಯರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಪಿಎಲ್ ಪಡಿತರ ಚೀಟಿ ಇಂದು ಉಳ್ಳವರ ಪಾಲಾಗುತ್ತಿದ್ದು, ನೈಜ ಫಲಾನುಭವಿಗಳು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಿ ನೈಜ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದ ದಿನೇಶ್ ಗುಂಡೂರಾವ್, ಅಂಗನವಾಡಿ ಕಾರ್ಯಕತೆರ್ಯರು ಮತ್ತು ಸಹಾಯಕಿಯರು ಈ ಸೌಲಭ್ಯ ಪಡೆಯಲು ಅರ್ಹರು ಎಂದು ಅಭಿಪ್ರಾಯಪಟ್ಟರು. ಸರಕಾರದ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಗರಿಕ ಸಮಾಜದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಮಾಸಿಕ ವೇತನ ಕಡಿಮೆಯಾಯಿತು ಎನ್ನುವ ಕೂಗಿದ್ದು, ಕೇಂದ್ರ ಸರಕಾರ ಸ್ಪಂದನೆ ನೀಡಿದಲ್ಲಿ ರಾಜ್ಯ ಸರಕಾರ ಕೂಡ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಬಹುದಾಗಿದೆ ಎಂದು ದಿನೆಶ್ ಗುಂಡೂರಾವ್ ತಿಳಿಸಿದರು.

ವೇತನ ಹೆಚ್ಚಳದ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸುವುದಲ್ಲದೆ ಸ್ಥಳೀಯ ಕ್ಷೇತ್ರದ ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ನೀಡುವುದಾಗಿ ಭರವಸೆ ನೀಡಿದರು. ಕರ್ನಾಟಕ ಸರಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಮಾತನಾಡಿ, ವೇತನಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕನಿಷ್ಠ ವೇತನವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ 10 ಸಾವಿರಕ್ಕಾದರೂ ಏರಿಕೆ ಮಾಡುವ ಅಗತ್ಯವಿದೆ ಎಂದರು.

ರಾಜ್ಯ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘದ ಉಪಾಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 871 ಅಂಗನವಾಡಿ ಕೇಂದ್ರಗಳಿದ್ದು, 848 ಕಾರ್ಯಕತೆರ್ಯರು ಮತ್ತು 728 ಸಹಾಯಕಿಯರು ಇದ್ದಾರೆ. ಜಿಲ್ಲೆಯಲ್ಲಿ 18 ಇಲಾಖೆಗಳ ಪರವಾಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದು, ವೇತನ ಹೆಚ್ಚಳಕ್ಕಾಗಿ ಒತ್ತಾಯಿಸಿ ದೇಶದಾದ್ಯಂತ ಹೋರಾಟ ರೂಪಿಸುವುದಾಗಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರನ್ನು ಬಿಪಿಎಲ್ ಪಟ್ಟಿಗೆ ಸೇರ್ಪಡೆಗೊಳಿಸಿ 18 ಸಾವಿರ ರೂ. ಹಾಗೂ 8 ಸಾವಿರ ರೂ.ಗಳಂತೆ ವೇತನ ಹೆಚ್ಚಳ ಮಾಡಬೇಕೆಂದು ರಮೇಶ್ ಒತ್ತಾಯಿಸಿದರು.

 ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮ್ಮ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News