ಕಲಿಯಂಡ ತಂಡಕ್ಕೆ ಜಯ
ಮಡಿಕೇರಿ, ಮೇ 8: ಕೊಡವ ಕುಟುಂಬ ತಂಡಗಳ ನಡುವೆ ನಡೆದ 20ನೆ ವರ್ಷದ ಶಾಂತೆಯಂಡ ಕಪ್ ಹಾಕಿ ಉತ್ಸವದ ಅಂತಿಮ ಪಂದ್ಯದಲ್ಲಿ ಕಲಿಯಂಡ ತಂಡ ರೋಚಕ ಗೆಲುವು ದಾಖಲಿಸಿದೆ.
ಸೋಲನ್ನು ಅನುಭವಿಸುವ ಮೂಲಕ ಪಳಂಗಂಡ ತಂಡದ 6ನೆ ಬಾರಿಗೆ ಪ್ರಶಸ್ತಿಯನ್ನು ಪಡೆಯುವ ಕನಸು ನುಚ್ಚುನೂರಾಗಿ, ಮೂರನೆ ಬಾರಿಗೆ ರನ್ನರ್ಸ್ ಅಪ್ ಪ್ರಶಸ್ತಿಗೆ ಭಾಜನವಾಯಿತು.
ಸಹಸ್ರಾರು ಮಂದಿ ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಕ್ಷಣಕ್ಷಣಕ್ಕೂ ಕುತೂಹಲವನ್ನು ಹಿಡಿದಿಟ್ಟುಕೊಂಡು ಸಾಗಿದ ಅಂತಿಮ ಪಂದ್ಯದಲ್ಲಿ ಕಲಿಯಂಡ ತಂಡ ಸಡನ್ ಡೆತ್ ಮೂಲಕ ಪಳಂಗಂಡ ತಂಡವನ್ನು 6-5 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಆಕರ್ಷಕ ಟ್ರೋಫಿ ಮತ್ತು 2 ಲಕ್ಷ ರೂ. ನಗದು ಬಹುಮಾನವನ್ನು ಪಡೆದುಕೊಂಡಿತು.
ಬಲಿಷ್ಠ ಪಳಂಗಂಡ, ಉತ್ಸಾಹಿ ಯುವ ಹಾಕಿ ಪಟುಗಳನ್ನು ಒಳಗೊಂಡ ಕಲಿಯಂಡ ತಂಡ ಮೊದಲ ಕ್ವಾರ್ಟರ್‌ನಲ್ಲಿ ದಾಳಿಗೆ ಪ್ರತಿದಾಳಿ ಎಂಬಂತೆ ಸಂಘರ್ಷದ ಆಟಕ್ಕೆ ಒತ್ತು ನೀಡುವ ಮೂಲಕ ಪಂದ್ಯದ ಕಾವೇರಿತು. ಪಳಂಗಂಡ ತಂಡ 10ನೆ ನಿಮಿಷದಲ್ಲಿ ಪಡೆದ ಪೆನಾಲ್ಟಿ ಕಾರ್ನರ್‌ನಲ್ಲಿ ತಂಡದ ಸ್ಟಾರ್ ಆಟಗಾರ ಅಮರ್ ಅಯ್ಯಮ್ಮ ಮಿಂಚಿನ ಗೋಲು ಸಿಡಿಸಿ ತಂಡಕ್ಕೆ ಮಹತ್ವದ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು. ದ್ವಿತೀಯ ಕ್ವಾರ್ಟರ್‌ನಲ್ಲಿ ಕಲಿಯಂಡ ರಕ್ಷಣೆಯೊಂದಿಗೆ ದಾಳಿಯ ಆಟಕ್ಕೆ ಒತ್ತು ನೀಡಿ ಪಳಂಗಂಡ ತಂಡದ ಡಿ ಆವರಣಕ್ಕೆ ಸತತ ದಾಳಿಗಳನ್ನು ಸಂಘಟಿಸಿ 5 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದುಕೊಂಡಿತಾದರೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮೂರನೆ ಕ್ವಾರ್ಟರ್ ಆರಂಭದಲ್ಲೆ ಕಲಿಯಂಡ ತಂಡದ ಮುನ್ಪಡೆ ಆಟಗಾರರಾದ ಭರತ್, ಕಾರ್ಯಪ್ಪ ಸಂಘಟಿಸಿದ ದಾಳಿಯಲ್ಲಿ ದೊರಕಿದ ಅವಕಾಶವನ್ನು ಕಿರಣ್ ಕಾರ್ಯಪ್ಪ ಅಷ್ಟೇ ಚಾಕಚಕ್ಯತೆಯಿಂದ ಬಳಸಿಕೊಂಡು ಬಿರುಸಿನಿಂದ ಹೊಡೆದ ಚೆಂಡು ಪಳಂಗಂಡ ತಂಡದ ಗೋಲನ್ನು ವಂಚಿಸುವುದರೊಂದಿಗೆ ಪಂದ್ಯ 1-1 ಗೋಲಿನ ಸಮಸ್ಥಿತಿಯಲ್ಲಿ ನೆಲೆಸಿತು. ಕೊನೆಯ ನಾಲ್ಕನೆ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಗೂ ಗೋಲುಗಳಿಸುವ ಮುಕ್ತ ಅವಕಾಶಗಳು ದೊರೆತರೂ ಅದು ಗೋಲಾಗಿ ಪರಿವರ್ತಿತವಾಗದೆ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತು.
ವಿಜೇತ ತಂಡವನ್ನು ನಿರ್ಧರಿಸುವ ಶೂಟೌಟ್‌ನಲ್ಲಿ ಪಳಂಗಂಡ ತಂಡದ ಅಜಯ್, ಕಾಳಪ್ಪ, ಅಮರ್ ಮತ್ತು ಮುತ್ತಣ್ಣ ಗೋಲು ಗಳಿಸಿದರೆ, ಕಲಿಯಂಡ ತಂಡದ ಭರತ್, ಕಾರ್ಯಪ್ಪ, ಬಿದ್ದಪ್ಪ ಮತ್ತು ದೇವಯ್ಯ ಗೋಲುಗಳಿಸುವುದರೊಂದಿಗೆ ಪಂದ್ಯ ಮಗದೊಮ್ಮೆ ಸಮಬಲದಲ್ಲಿ ನೆಲೆಸಿತು. ನಂತರ ನಡೆದ ಸಡನ್ ಡೆತ್‌ನಲ್ಲಿ ಕಲಿಯಂಡ ಕಾರ್ಯಪ್ಪಗೋಲುಗಳಿಸುವುದರೊಂದಿಗೆ ಕಲಿಯಂಡ ತಂಡ 2016ರ ಶಾಂತೆಯಂಡ ಕಪ್ ಹಾಕಿ ಉತ್ಸವದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆಟಗಾರರನ್ನು ಪರಿಚಯಿಸಿಕೊಂಡು ಬೆಳ್ಳಿಯ ಚೆಂಡನ್ನು ಬೆಳ್ಳಿಯ ಸ್ಟಿಕ್‌ನಿಂದ ಹೊಡೆಯುವ ಮೂಲಕ ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರನ್ನರ್ಸ್ ಅಪ್ ಪಳಂಗಂಡಕ್ಕೆ 1 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ವಿತರಿಸಿದರೆ, ಇಬ್ನಿಸ್ಪಾ ರೆಸಾರ್ಟ್‌ನ ಕ್ಯಾಪ್ಟನ್ ಸೆಬಾಸ್ಟಿನ್ ವಿಜೇತ ಕಲಿಯಂಡ ತಂಡಕ್ಕೆ ಪ್ರಶಸ್ತಿಯನ್ನು ವಿತರಿಸಿದರು.