×
Ad

ಕೊಡಗಿನಲ್ಲಿ ರಕ್ಷಣಾ ಅಕಾಡಮಿ ಸ್ಥಾಪನೆ: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್

Update: 2016-05-08 22:15 IST

ಮಡಿಕೇರಿ, ಮೇ 8: ಕೊಡಗಿನಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡಮಿಯ ಶಾಖೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದೆಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಭರವಸೆ ನೀಡಿದ್ದಾರೆ.

ನಗರದಲ್ಲಿ ನಡೆದ ಶಾಂತೆಯಂಡ ಕಪ್ ಹಾಕಿ ಉತ್ಸವದ ಅಂತಿಮ ಪಂದ್ಯಾಟದ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇನಾನಿಗಳ ಜಿಲ್ಲೆ ಕೊಡಗಿನಲ್ಲಿ ಇನ್ನೂ ಕೂಡ ರಕ್ಷಣಾ ಅಕಾಡಮಿ ಸ್ಥಾಪನೆಯಾಗದೆ ಇರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಹುಟ್ಟಿದ ಜಿಲ್ಲೆ ಎನ್ನುವ ಕಾರಣಕ್ಕಾಗಿ ಕೊಡಗಿಗೆ ಭೇಟಿ ನೀಡಿದ್ದೇನೆ. ಈ ಪುಟ್ಟ ಜಿಲ್ಲೆಯಿಂದ ಅನೇಕ ಸಂಖ್ಯೆಯ ಸೈನಿಕರು ಮತ್ತು ಹಾಕಿಪಟುಗಳು ಈ ದೇಶಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಚಾರವೆಂದು ಶ್ಲಾಘಿಸಿದರು.

  

ತಾನು ಗೋವಾ ಮೂಲದವನಾಗಿದ್ದು, ಅಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ಇದೆ. ಆದರೆ ಕೊಡಗು ಸೈನಿಕರಿಗೆ ಹೆಸರುವಾಸಿಯಾದ ಜಿಲ್ಲೆಯಾದರೂ ಉದಯೋನ್ಮುಖ ಹಾಕಿ ಪಟುಗಳು ಹೊರಹೊಮ್ಮುತ್ತಿರುವುದು ಸಂತಸದ ವಿಚಾರವೆಂದು ಸಚಿವ ಮನೋಹರ್ ಪಾರಿಕ್ಕರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕೊಡವ ಕುಟುಂಬ ತಂಡಗಳ ನಡುವೆ ನಡೆಯುತ್ತಿರುವ ಈ ಅಪರೂಪದ ಪಂದ್ಯಾಟ ದೇಶದಲ್ಲೇ ಪ್ರಥಮವಾಗಿದ್ದು, ಇದು ಹೆಮ್ಮೆಯ ವಿಚಾರವೆಂದರು. ಕೊಡಗು ಕರ್ನಾಟಕ ರಾಜ್ಯದ ರತ್ನವಾಗಿದ್ದು, ಎಲ್ಲರೂ ಸೇರಿ ಜಿಲ್ಲೆಯ ಪ್ರಗತಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದ ಅವರು, ಇದೇ ಮೊದಲ ಬಾರಿಗೆ ತಾವು ಕೊಡವ ಹಾಕಿ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದು, ದೇಶದ ರಕ್ಷಣಾ ಸಚಿವರು ಉಪಸ್ಥಿತರಿರುವುದು ಹರ್ಷ ತಂದಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೊಡಗು ಸೈನಿಕರ ನೆಲೆ ಬೀಡು ಮಾತ್ರವಲ್ಲ ಕ್ರೀಡಾಕಲಿಗಳ ನಾಡು ಕೂಡ ಹೌದು ಎಂದರು. ಜಿಲ್ಲೆಯ ಸೈನಿಕ ಪರಂಪರೆಯ ಕುರಿತು ದೇಶದ ರಕ್ಷಣಾ ಸಚಿವರಿಗೆ ಸಂಪೂರ್ಣ ಮಾಹಿತಿಯಿದ್ದು, ಇದೇ ಅಭಿಮಾನದಿಂದ ಅವರು ಇಂದು ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶಾಸಕದ್ವಯರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ರಾಜ್ಯ ಕರಕುಶಲ ನಿಗಮದ ಅಧ್ಯಕ್ಷೆ ವೀಣಾಅಚ್ಚಯ್ಯ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಕಾಂಗ್ರೆಸ್ ಪ್ರಮುಖರಾದ ಬ್ರಿಜೇಶ್ ಕಾಳಪ್ಪ, ಮಿಟ್ಟು ಚಂಗಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಕೊಡವ ಕುಟುಂಬಗಳ ಹಾಕಿ ಪಂದ್ಯಾಟದ ಜನಕ ಪಾಂಡಂಡ ಕುಟ್ಟಪ್ಪ, ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.

ಬೇಡಿಕೆಗಳು: ಫಿೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಮಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು. ರಾಷ್ಟ್ರೀಯ ರಕ್ಷಣಾ ಅಕಾಡಮಿಯ ಶಾಖೆ ಮತ್ತು ಸೇನಾ ಕಾಲೇಜು ಸ್ಥಾಪಿಸ ಬೇಕು. ನಿವೃತ್ತ ಸೈನಿಕರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಕೊಡಗಿನಲ್ಲಿ ಹಾಕಿ ಅಕಾಡಮಿ ಸ್ಥಾಪಿಸಬೇಕು. ಸೇನೆಯಲ್ಲಿ ಕೊಡಗು ರೆಜ್‌ಮೆಂಟ್‌ನ್ನು ಆರಂಭಿಸಬೇಕು. ಜಿಲ್ಲೆಯನ್ನು ಡಿಎಫ್

ಆರ್‌ಐ ಕೇಂದ್ರವನ್ನಾಗಿ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಬೆಳಿ್ಳ ಸಿ್ಟಕ್ ಬೆಳಿ್ಳ ಬಾಲ್: ಸಭಾ ಕಾರ್ಯಕ್ರಮದ ನಂತರ ಮೈದಾನಕ್ಕೆ ತೆರಳಿದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು, ಪಳಂಗಂಡ ಮತ್ತು ಕಲಿಯಂಡ ತಂಡಗಳ ಆಟಗಾರರನ್ನು ಪರಿಚಯಿಸಿಕೊಂಡರು. ಬಳಿಕ ಬೆಳ್ಳಿ ಸ್ಟಿಕ್‌ನಿಂದ ಬೆಳ್ಳಿಯ ಬಾಲ್‌ಗೆ ಹೊಡೆಯುವ ಮೂಲಕ ಅಂತಿಮ ಪಂದ್ಯಾಟಕ್ಕೆ ಸಚಿವರು ಚಾಲನೆ ನೀಡಿದರು.

ರಕ್ಷಣಾ ಸಚಿವರಿಗೆ ಗೌರವ: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಆಗಮಿಸುತ್ತಿದ್ದಂತೆ ಪಂದ್ಯಾಟ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಜನ ಎದ್ದು ನಿಂತು ಗೌರವ ಅರ್ಪಿಸಿದರು. ಕೊಡಗಿನ ಜನರ ಶಿಸ್ತನ್ನು ಕಂಡು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶುಭಕೋರಿದ ಮಳೆ ಹನಿ: ಶಾಂತೆಯಂಡ ಕಪ್‌ಗಾಗಿ ಪಳಂಗಂಡ ಮತ್ತು ಕಲಿಯಂಡ ತಂಡಗಳ ನಡುವೆ ಅಂತಿಮ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮಳೆಹನಿಗಳ ಸಿಂಚನವಾಯಿತು. ಉತ್ತಮ ಮಳೆಯಾಗುವ ಆತಂಕ ಆಯೋಜಕರಲ್ಲಿ ಇತ್ತಾದರೂ ನಂತರ ಬದಲಾದ ಉರಿ ಬಿಸಿಲಿನ ವಾತಾವರಣ ಸಾವಿರಾರು ಕ್ರೀಡಾಭಿಮಾನಿಗಳಲ್ಲಿ ಬೆವರಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News