×
Ad

ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ: ಸಚಿವ ದಿನೇಶ್ ಗುಂಡೂರಾವ್ ಸೂಚನೆ

Update: 2016-05-08 22:18 IST

ಮಡಿಕೇರಿ, ಮೇ 8: ಕುಡಿಯುವ ನೀರು ಸಮಸ್ಯೆ ಸಂಬಂಧಿಸಿದಂತೆ ಕೂಡಲೇ ಗ್ರಾಮ ಪಂಚಾಯತ್‌ವಾರು ಮಾಹಿತಿ ಒದಗಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಬರ ನಿರ್ವಹಣೆ ಪ್ರಗತಿ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು ಸಮಸ್ಯೆ ಪರಿಹರಿಸುವ ಸಂಬಂಧ ಸಚಿವ ಸಂಪುಟದ ಉಪ ಸಮಿತಿ ಸೇರಿದಂತೆ ಈಗಾಗಲೇ ಸಾಕಷ್ಟು ಬಾರಿ ಸಭೆ ನಡೆದಿದೆ. ಅದರ ಫಲಿತಾಂಶದ ಪ್ರಗತಿಯ ಮಾಹಿತಿಯನ್ನು ಗ್ರಾಮ ಪಂಚಾಯತ್‌ವಾರು ನೀಡಬೇಕು ಎಂದು ಸೂಚಿಸಿದರು.

ಬರ ನಿರ್ವಹಣೆ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾಮಗಾರಿಗಳು, ಇನ್ನು ಮುಂದೆ ಕೈಗೊಳಬೇಕಿರುವ ಕಾಮಗಾರಿಗಳು, ಕುಡಿಯುವ ನೀರು ಸಂಬಂಧ ಕೈಗೊಳ್ಳಲು ಅಸಾಧ್ಯ ಎನ್ನುವಂತಹ ಕಾಮಗಾರಿಗಳು ಮತ್ತಿತರ ಮಾಹಿತಿಯ ಪಟ್ಟಿಯನ್ನು ನೀಡುವಂತೆ ತಾಪಂ ಇಒಗಳಿಗೆ ಗುಂಡೂರಾವ್ ಸೂಚನೆ ನೀಡಿದರು.

ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು. ದಿನದೂಡುವಂತಾದರೆ ಜನರ ಸಂಕಷ್ಟವನ್ನು ನಿವಾರಿಸುವುದು ಅಸಾಧ್ಯ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸುವುದು ಜನಸಾಮಾನ್ಯರಿಗಾಗಿ ಎಂಬುವುದನ್ನು ಅರ್ಥಮಾಡಿಕೊಳ್ಳುವಂತೆ ಸಚಿವರು ತಿಳಿಸಿದರು.

   

ಹಾಗೆಯೇ ಇನ್ನೆರಡು-ಮೂರು ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಕೊಡಗು ಜಿಲ್ಲೆಯ ಕುಡಿಯುವ ನೀರಿಗಾಗಿ 3 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕುಡಿ ಯುವ ನೀರಿನ ಸಮಸ್ಯೆ ಪರಿಹರಿಸುವ ಸಂಬಂಧ ಅಗತ್ಯವಿರುವೆಡೆ ಕೊಳವೆ ಬಾವಿ ತೆಗೆಸುವುದು, ಇರುವ ಕೊಳವೆ ಬಾವಿಗಳನ್ನು ಸುಧಾರಣೆ ಮಾಡುವುದು ಮತ್ತಿತರ ಕಾರ್ಯಗಳನ್ನು ಮಾಡಬೇಕಿದೆ. ಜೊತೆಗೆ ಬಾಕಿ ಇರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಲ್ಪಿಸಬೇಕಿದೆ ಎಂದು ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಕುಡಿಯುವ ನೀರು ಸಮಸ್ಯೆ ನಿವಾರಣೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕಾಲಮಿತಿಯೊಳಗೆ ಕುಡಿಯುವ ನೀರು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸದಸ್ಯ ಲತೀಫ್ ರಂಗಸಮುದ್ರ ಬಳಿಯ ಕಬ್ಬಿನ ಗದ್ದೆ ಸೇರಿದಂತೆ ತಮ್ಮ ಜಿಪಂವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಮಾತನಾಡಿ, 51 ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿಪಂ ಉಪ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಮುಖ್ಯ ಯೋಜನಾಧಿಕಾರಿ ತಾಕತ್‌ರಾವ್, ಜಿಪಂ ಕುಡಿಯುವ ನೀರು ವಿಭಾಗದ ಇಇ ಶಶಿಧರ್, ತಹಶೀಲ್ದಾರ ಕುಂಞಮ್ಮ, ಶಿವಪ್ಪ, ತಾಪಂ.ಇಒಗಳಾದ ಚಂದ್ರಶೇಖರ್, ಪಡ್ನೇಕರ್ ಹಲವು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News