ಬರಗಾಲ ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಿಸಿ ವಿ.ಪಿ. ಇಕ್ಕೇರಿ
ಸೊರಬ, ಮೇ 8: ತಾಲೂಕಿನಲ್ಲಿ ಉಂಟಾಗಿರುವ ಭೀಕರ ಬರಗಾಲವನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧವಿದ್ದು, ಕುಡಿಯುವ ನೀರು ಸೇರಿದಂತೆ ಜನರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ ಇಕ್ಕೇರಿ ಹೇಳಿದ್ದಾರೆ.
ತಾಲೂಕಿನ ಉದ್ರಿ, ತತ್ತೂರು, ಬಾರಂಗಿ, ಜೋಗಿಹಳ್ಳಿ ಗ್ರಾಮಗಳಲ್ಲಿ ಬರ ವೀಕ್ಷಣೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ತಾಲೂಕಿನಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡುವಲ್ಲಿ ಮುಂದಾಗಿದೆ. ಬರದ ಪರಿಣಾಮವಾಗಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದು, ಜನರು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗದಂತೆ ತಡೆಗಟ್ಟಲು ಮತ್ತು ಪ್ರಾಣಿ-ಪಕ್ಷಿಗಳು ನೀರಿನ ಸಮಸ್ಯೆಯಿಂದ ಬಳಲದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಹೂಳೆತ್ತುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಎಂದರು. ತಾಲೂಕಿನ ಜನರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೊಳವೆ ಬಾವಿಗಳನ್ನು ಕೊರೆಯಿಸಿ ನೀರು ಪೂರೈಸಲಾಗುತ್ತಿದೆ. ಕೆಲವು ಭಾಗದಲ್ಲಿ ಕೊಳವೆ ಬಾವಿ ವಿಫಲವಾಗುತ್ತಿದ್ದು, ಅಂತಹ ಸಂದರ್ಭದಲ್ಲಿ ಸ್ಥಳೀಯ ಆಡಳಿತಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲು ಸೂಚಿಸಲಾಗಿದೆ ಎಂದರು.
ತಾಲೂಕಿನ ಜನರು ಯಾವುದೇ ಕಾರಣಕ್ಕೂ ಬರಗಾಲಕ್ಕೆ ಭಯ ಪಡುವ ಅಗತ್ಯವಿಲ್ಲ. ತಾಲೂಕಿನಲ್ಲಿ ಉಂಟಾಗಿರುವ ಬರದ ವಾಸ್ತವತೆ ತಿಳಿದು ವರದಿ ಪಡೆಯಲು ಸದ್ಯದಲ್ಲಿಯೇ ತಾಲೂಕಿಗೆ ಕಂದಾಯ ಸಚಿವರ ನೇತೃತ್ವದಲ್ಲಿ ಬರ ವೀಕ್ಷಣೆ ತಂಡವು ಆಗಮಿಸಲಿದ್ದು, ಬರದ ಸಂಪೂರ್ಣ ವಿವರವನ್ನು ಪಡೆದು ಸೂಕ್ತ ಪರಿಹಾರ ಕಂಡು ಹಿಡಿದು ನಿರ್ಧಾರ ಕೈಗೊಳ್ಳಲಿದೆ ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ರಾಕೇಶಕುಮಾರ್, ತಹಶೀಲ್ದಾರ್ ಕವಿತಾ ಯೋಗಪ್ಪನವರ್, ತಾಪಂ ಇಒ ಎಸ್‌ಎಂಡಿ ಇಸ್ಮಾಯೀಲ್, ಪಪಂ ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಮಂಜುಳಾ ಸೇರಿದಂತೆ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು