×
Ad

ಸಂಪುಟ ನಿರ್ಣಯ ಹಿಂಪಡೆಯಲು ವಕ್ಫ್‌ಬೋರ್ಡ್ ಮನವಿ

Update: 2016-05-08 22:34 IST

ಬೆಂಗಳೂರು, ಮೇ 8: ನೆದರ್‌ಲ್ಯಾಂಡ್ ಮೂಲದ ನೆಕ್ಸಸ್ ನೋವಾಸ್ ಸಂಸ್ಥೆಗೆ ಯಲಹಂಕ ಸಮೀಪದ ಬೆಲ್ಲಹಳ್ಳಿಯಲ್ಲಿರುವ ಹಝ್ರತ್ ಮಾಣಿಕ್ ಶಾ ದರ್ಗಾಗೆ ಸೇರಿದ 7 ಎಕರೆ ಜಮೀನನ್ನು 20 ವರ್ಷಕ್ಕೆ ಭೋಗ್ಯಕ್ಕೆ ನೀಡಲು ಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ಮುಸ್ಲಿಮ್ ಸಮುದಾಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ರವಿವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅರ್ಧಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ವಕ್ಫ್ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಸಮುದಾಯದ ಉಲೇಮಾಗಳು, ಸಂಘ ಸಂಸ್ಥೆಗಳಿಂದ ವ್ಯಕ್ತವಾಗಿರುವ ವಿರೋಧದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಮುಹಮ್ಮದ್ ಯೂಸುಫ್, ಹಝ್ರತ್ ಮಾಣಿಕ್ ಶಾ ದರ್ಗಾಗೆ ‘ಮೈಸೂರು ಹುಲಿ’ಟಿಪ್ಪುಸುಲ್ತಾನ್ ಬೆಲ್ಲಹಳ್ಳಿಯಲ್ಲಿ 602 ಎಕರೆ 29 ಗುಂಟೆ ಹಾಗೂ ಭೂಪಸಂದ್ರದ ಸರ್ವೆ ನಂ.14,15 ಹಾಗೂ 22ರಲ್ಲಿ 368 ಎಕರೆ 36 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದರು ಎಂದರು.
 ಈ ಭೂಮಿಯನ್ನು ಸರಕಾರದ ಮುಜುರಾಯಿ ಇಲಾಖೆ ನಿರ್ವಹಣೆ ಮಾಡುತ್ತಿತ್ತು. 1973ರಲ್ಲಿ ವಕ್ಫ್ ಬೋರ್ಡ್ ರಚನೆಯಾದ ನಂತರ ಆ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಲಾಗಿತ್ತು. ಭೂಮಿಯ ದಾಖಲೆಗಳನ್ನು ವಕ್ಫ್ ಬೋರ್ಡ್ ಹೆಸರಿಗೆ ವರ್ಗಾಯಿಸಲು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್‌ಗೆ ನಿರ್ದೇಶನ ನೀಡುವಂತೆ ಕೋರಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆಯಲಾಗಿತ್ತು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ: ಬೆಲ್ಲಹಳ್ಳಿಯಲ್ಲಿರುವ ವಕ್ಫ್ ಭೂಮಿಯ ವಿವಾದವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಸಂದರ್ಭದಲ್ಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ರಾಜ್ಯ ಸರಕಾರದ ಸಚಿವಾಲಯದ ‘ಡಿ’ ದರ್ಜೆ ನೌಕರರ ಸಂಘಕ್ಕೆ ಬೆಲ್ಲಹಳ್ಳಿಯ ಸರ್ವೇ ನಂ.55ರಲ್ಲಿ 15 ಎಕರೆಯನ್ನು ಮಂಜೂರು ಮಾಡಿದ್ದರು ಎಂದು ಯೂಸುಫ್ ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಜಿಲ್ಲಾಧಿಕಾರಿ ಮತ್ತೆ ಅದೇ ಸರ್ವೇ ನಂಬರ್‌ನಲ್ಲಿ 9.30 ಎಕರೆ ಭೂಮಿ ಯನ್ನು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಬಿಬಿಎಂಪಿಗೆ ಮಂಜೂರು ಮಾಡಿದ್ದಾರೆ. ಕಳೆದ ಸಚಿವ ಸಂಪುಟದಲ್ಲಿ 7 ಎಕರೆ ಭೂಮಿಯನ್ನು ನೆದರ್‌ಲ್ಯಾಂಡ್ ಮೂಲದ ಸಂಸ್ಥೆಗೆ ನೀಡಲು ತೀರ್ಮಾನ ಕೈಗೊಂಡಿರುವ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆದಿದ್ದೇನೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಸರಕಾರವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲದಿದ್ದರೆ, ಪದೇ ಪದೇ ಈ ಬೆಲ್ಲಹಳ್ಳಿಯಲ್ಲಿರುವ ವಕ್ಫ್ ಆಸ್ತಿಯನ್ನು ಸರಕಾರಿ ಭೂಮಿ ಎಂದು ಹೇಗೆ ಪರಿಗಣಿಸ ಲಾಗುತ್ತಿದೆ. ಸಮುದಾಯದವರಿಗಾಗಿ ಸ್ಮಶಾನ, ಮದ್ರಸಾ, ಶಿಕ್ಷಣ ಸಂಸ್ಥೆಗಳು ಹಾಗೂ ಬಡವರಿಗೆ ಮನೆಗಳನ್ನು ನಿರ್ಮಿಸಲು ನಗರ ಪ್ರದೇಶದಲ್ಲಿ ಭೂಮಿ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇರುವ ಭೂಮಿಯನ್ನು ಕಸಿದು ಕೊಂಡರೆ ಏನು ಮಾಡಬೇಕು ಎಂದು ಯೂಸುಫ್ ಪ್ರಶ್ನಿಸಿದರು.
ಒಮ್ಮೆ ವಕ್ಫ್ ಭೂಮಿ ಎಂದು ಘೋಷಿಸಲ್ಪಟ್ಟ ಭೂಮಿ ಹಾಗೂ ಆಸ್ತಿ ‘ಶಾಶ್ವತವಾಗಿ ವಕ್ಫ್’ಗೆ ಸೇರಿದ್ದಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ಸೈಯದ್ ಅಲಿ ಹಾಗೂ ಇತರರು ಮತ್ತು ಆಂಧ್ರಪ್ರದೇಶ ಸರಕಾರದ ನಡುವಿನ ಪ್ರಕರಣವೊಂದರಲ್ಲಿ ಮಹತ್ವದ ಆದೇಶವನ್ನು ನೀಡಿದೆ ಎಂದು ಅವರು ತಿಳಿಸಿದರು.
ನಮ್ಮ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ವೀಕರಿಸಿದ್ದು, ಈ ಸಂಬಂಧ ವಿವರಣೆ ನೀಡುವಂತೆ ಕೋರಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಜ್ಮಾಹೆಫ್ತುಲ್ಲಾ, ಸಚಿವ ಖಮರುಲ್‌ಇಸ್ಲಾಮ್, ಕಾನೂನು ಸಚಿವರು, ಬೆಂಗಳೂರು ನಗರಾಭಿವೃದ್ಧಿ ಸಚಿವ, ಕಂದಾಯ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಸೇರಿದಂತೆ ಇನ್ನಿತರರಿಗೆ ಪತ್ರ ಬರೆದಿದ್ದೇನೆ ಎಂದು ಯೂಸುಫ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಝ್ರತ್ ಮಾಣಿಕ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News