×
Ad

ಆನ್‌ಲೈನ್ ಗೊಂದಲ; ವಿದ್ಯಾರ್ಥಿಗಳ ಪರದಾಟ

Update: 2016-05-08 22:36 IST

ಬೆಂಗಳೂರು, ಮೇ 8: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ‘ನೀಟ್’ ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಮಾತ್ರ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ (ಕಾಮೆಡ್-ಕೆ) ರವಿವಾರ ನಡೆಸಿದ ಪರೀಕ್ಷೆ ಮಾಹಿತಿ ಕೊರತೆ, ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಯಿತು.
ಶನಿವಾರ ರಾತ್ರಿ ಪರೀಕ್ಷಾ ಕೇಂದ್ರಗಳ ದಿಢೀರ್ ಬದಲಾವಣೆ ಬಗ್ಗೆ ಎಸ್‌ಎಂಎಸ್ ಕಳುಹಿಸಿ ಕಾಮೆಡ್-ಕೆ ಗೊಂದಲ ಮೂಡಿಸಿದ ಪರಿಣಾಮ ವಿದ್ಯಾರ್ಥಿಗಳು ಸಕಾಲಕ್ಕೆ ಪರೀಕ್ಷಾ ಕ್ಷೇಂದ್ರಕ್ಕೆ ಹಾಜರಾಗದೆ ಸಮಸ್ಯೆಗೆ ಸಿಲುಕಿದರು. ಕೆಲವು ಕಡೆ ವಿದ್ಯಾರ್ಥಿ ಪೋಷಕರು ಪರೀಕ್ಷಾ ಕೇಂದ್ರದ ನಿರ್ವಾಹಕರ ವಿರುದ್ಧ ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದು ನಡೆಯಿತು.
ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿನ ತಾಂತ್ರಿಕ ಸಮಸ್ಯೆಯಿಂದ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿತ್ತು. ನಗರದ ಕೆಲವೊಂದು ಕಾಲೇಜುಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ನೀಡಲಾಗಿತ್ತು. ಉಳಿದಂತೆ ಅನೇಕ ಕಡೆ ಸುಗಮವಾಗಿ ಪರೀಕ್ಷೆ ನಡೆಯಿತು.
ಬೆಂಗಳೂರಿನ 78ಕೇಂದ್ರಗಳ ಪೈಕಿ 5ಕೇಂದ್ರಗಳಲ್ಲಿ ಆನ್‌ಲೈನ್ ಲಾಗಿನ್ ಆಗಲು ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಹೆಚ್ಚಿನ ಸಮಯವಕಾಶ ನೀಡಲಾಗಿತ್ತು. ಕೋರಮಂಗಲದ ವೇಮನಾ ಕಾಲೇಜು ಸೇರಿದಂತೆ ಉಳಿದ ನಾಲ್ಕು ಕೇಂದ್ರಗಳಲ್ಲಿ ಸಮಸ್ಯೆಯಾಗಿದೆ ಎಂದು ಗೊತ್ತಾಗಿದೆ.
ವೇಮನಾ ಕಾಲೇಜಿನಲ್ಲಿ ನಿಗದಿತ ಸಮಯಕ್ಕೆ ಪರೀಕ್ಷೆ ಬರೆಯಲು ಹಾಜರಾದರೂ ಸುಮಾರು 30ವಿದ್ಯಾರ್ಥಿಗಳಿಗೆ ಅವಕಾಶ ಸಿಗದೆ ಗೊಂದಲ ಉಂಟಾಯಿತು. ಮಾಹಿತಿ ನೀಡಲು ಕಾಮೆಡ್ ಕೆ ಸಂಸ್ಥೆಯ ಅಧಿಕಾರಿಗಳು ಇರಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಬದಲಾವಣೆ ಮಾಡಿರುವ ಬಗ್ಗೆ ಕೊನೆ ಕ್ಷಣದಲ್ಲಿ ಎಸ್‌ಎಂಎಸ್ ಕಳುಹಿಸಿದ ಪರಿಣಾಮ ವಿದ್ಯಾರ್ಥಿ ಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಪರದಾಡಬೇಕಾಯಿತು.
ಬೆಂಗಳೂರಿನ 78 ಕೇಂದ್ರ ಸೇರಿದಂತೆ ರಾಜ್ಯದ 152 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷೆಗೆ ನೋಂದಾಯಿಸಿದ್ದ 69,102ವಿದ್ಯಾರ್ಥಿಗಳ ಪೈಕಿ 54,300 (ಶೇ.78.6) ವಿದ್ಯಾರ್ಥಿಗಳು ಹಾಜರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಭದ್ರತೆ ವಹಿಸಿದ್ದರಿಂದ ಯಾವುದೇ ಕೇಂದ್ರದಲ್ಲಿ ಡಿಬಾರ್ ಆಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News