×
Ad

ದಲಿತ ಸಿಎಂ ಆದ ಮಾತ್ರಕ್ಕೆ ಶೋಷಿತರ ಅಭಿವೃದ್ಧಿಯಾಗದು: ಸತೀಶ್ ಜಾರಕಿಹೊಳಿ

Update: 2016-05-08 22:38 IST

ಬೆಂಗಳೂರು, ಮೇ 8: ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕ ಕೂಡಲೆ ಶೋಷಿತ ದಲಿತರೆಲ್ಲರ ಉದ್ಧಾರ ಆಗುವುದಿಲ್ಲ. ಇದರ ಬದಲಿಗೆ ಸಮುದಾಯವನ್ನು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯತ್ತ ತರಲು ಎಲ್ಲರೂ ಗಮನಹರಿಸಬೇಕು ಎಂದು ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಿಸಿದ್ದಾರೆ.
ರವಿವಾರ ದಲಿತ ಸಂಘರ್ಷ ಸಮಿತಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮದಿನ ಹಾಗೂ ವಿಶ್ವ ಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ‘ಭಾರತದ ಸಂವಿಧಾನ ವರ್ತಮಾನದ ಸವಾಲು-ಭವಿಷ್ಯದ ಆಶಯ’ ಕುರಿತ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 ದಲಿತ ವರ್ಗದವರು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಬೆವರು ಸುರಿಸಿ ದುಡಿದ ಕೃಷಿ ಉತ್ಪನ್ನಗಳನ್ನು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಕೊಟ್ಟು, ಅದೇ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ನಾವೇ ಖರೀದಿಸುತ್ತಿದ್ದೇವೆ. ಹೀಗಾಗಿ ದೈಹಿಕವಾಗಿ ಶ್ರಮಿಸುವ ದಲಿತರು ವ್ಯವಹಾರದಲ್ಲಿ ತೊಡಗಿ ಆರ್ಥಿಕವಾಗಿ ಸಬಲರಾಗಬೇಕೆಂದು ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.
ದೇಶದಲ್ಲಿರುವ ನೂರು ಮಂದಿ ಶ್ರೀಮಂತರ ಪಟ್ಟಿಯಲ್ಲಿ ದಲಿತ, ಹಿಂದುಳಿದ ವರ್ಗದ ಒಬ್ಬ ವ್ಯಕ್ತಿಯೂ ಕಾಣಸಿಗುವುದಿಲ್ಲ. ದೇಶಕ್ಕೆ ಹೊರಗಿನಿಂದ ಬಂದ ಆರ್ಯರು ಇಡೀ ಸಂಪತ್ತಿನ ಒಡೆಯರಾಗಿದ್ದಾರೆ. ಈ ಆರ್ಥಿಕ ಬಲದಿಂದಾಗಿ ಮೇಲ್ವರ್ಗ ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲವನ್ನು ನಿಯಂತ್ರಿಸುತ್ತಿದೆ. ಹೀಗಾಗಿ ದೇಶದ ಮೂಲ ನಿವಾಸಿಗಳಾದ ದಲಿತ ವರ್ಗ ಸಂಪತ್ತನ್ನು ಗಳಿಸುವ ಕಡೆಗೆ ಗಮನಹರಿಸಬೇಕು ಎಂದು ಅವರು ತಿಳಿಸಿದರು.
  ಡಾ.ಬಿ.ಆರ್.ಅಂಬೇಡ್ಕರ್‌ರವರ ಸಿದ್ಧಾಂತವನ್ನು ಎಂದೂ ಒಪ್ಪಿಕೊಳ್ಳದ ಆರೆಸೆಸ್ಸ್, ಸಂಘ ಪರಿವಾರ ಅವರ ದಿನಾಚರಣೆಯನ್ನು ಆಚರಿಸುತ್ತಿದೆ. ಇದು ಅಂಬೇಡ್ಕರ್ ಸಿದ್ಧಾಂತವನ್ನು ತಿರುಚುವ ಷಡ್ಯಂತ್ರದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಯುವಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೋಮುವಾದಿಗಳ ಮಾತಿಗೆ ಕಿವಿಗೊಡ ಬಾರದು ಎಂದು ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದರು.
ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, ಆರೆಸ್ಸೆಸ್ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಸಂಘಟನೆ. ದುರಂತವೆಂದರೆ ಈ ಸಂಘಟನೆಯ ಸಿದ್ಧಾಂತವನ್ನು ಒಪ್ಪಿಕೊಂಡಿರುವವರೆ ದೇಶದ ಚುಕ್ಕಾಣಿ ಹಿಡಿದಿರುವುದು ಆಘಾತದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ, ಹೈದರಾಬಾದ್ ವಿವಿ ಅಂಬೇಡ್ಕರ್ ಸ್ಟೂಡೆಂಟ್ ಯೂನಿಯನ್ ಮುಖಂಡ ದೊಂತ ಪ್ರಶಾಂತ್, ಚಕ್ರ ಪ್ರತಿಷ್ಠಾನದ ಡಾ.ಲಕ್ಷ್ಮಿಪತಿ ಬಾಬು, ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ, ಭಾರತಿಯ ಸಾಮಾಜಿಕ, ಆರ್ಥಿಕ ಬದಲಾವಣೆ ಸಂಸ್ಥೆಯ ಕುಲಸಚಿವ ಪ್ರೊ.ಮನೋಹರ್ ಯಾದವ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಬೋಧಿ ಸುವ ಬಹುತೇಕ ಶಿಕ್ಷಕರು ಮನುವಾದಿಗಳಾಗಿ ದ್ದಾರೆ. ಉದ್ದೇಶ ಪೂರ್ವಕವಾಗಿಯೇ ದಲಿತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಕೊಡುವ ಮೂಲಕ, ಅವರ ಜೀವನವನ್ನು ನಿರ್ನಾಮ ಮಾಡುತ್ತಿದ್ದಾರೆ. ಈ ಬಗ್ಗೆ ಹೋರಾಟ ಮಾಡಿದರೆ ನಮ್ಮನ್ನು ಗೂಂಡಾಗಳ ಹಣೆಪಟ್ಟಿ ಕಟ್ಟಲಾಗುತ್ತದೆ.
-ಪ್ರಭಾಕರ್‌ಸಂಶೋಧನಾ ವಿದ್ಯಾರ್ಥಿ, ಹೈದರಾಬಾದ್ ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News