‘ಬುಡಕಟ್ಟು ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಭರವಸೆಯಾಗಿಯೇ ಉಳಿದಿದೆ: ತೀ.ನ.ಶ್ರೀನಿವಾಸ್
ಸಾಗರ, ಮೇ 9: ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯಡಿಯೂರಪ್ಪಅವರು ಗೆದ್ದು ಬಂದರೆ ಲೋಕಸಭೆಯಲ್ಲಿ ಚರ್ಚಿಸಿ ಬುಡಕಟ್ಟು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಇನ್ನೂ ಗಮನ ಹರಿಸಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ.ಶ್ರೀನಿವಾಸ್ ದೂರಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಅಡಿಕೆ ಹಾನಿಕಾರಕ ವಸ್ತು ಪಟ್ಟಿಯಿಂದ ತೆಗೆಯುವ ನಿಟ್ಟಿನಲ್ಲಿಯೂ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಯಡಿಯೂರಪ್ಪ ಅವರು ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಸಹ ನಿಗಾವಹಿಸದೆ ಇರುವುದು ಖಂಡನೀಯ ಎಂದರು. ಸಂಸತ್‌ನಲ್ಲಿ ಬಿಜೆಪಿಯ ಯಾವೊಬ್ಬ ಸಚಿವರು, ಸಂಸದರು ರಾಜ್ಯದ ಅರಣ್ಯಬುಡಕಟ್ಟು ಕಾಯ್ದೆ, ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಮಾತನಾಡಿಲ್ಲ. ವಿದೇಶಿ ಅಡಿಕೆ ಆಮದು ಮೇಲೆ ನಿಯಂತ್ರಣ ಹೇರುವಂತೆ ಕಾಂಗ್ರೆಸ್ ಒಳಗೊಂಡ ಅಡಿಕೆ ಬೆಳೆಗಾರರ ನಿಯೋಗ ಅನೇಕ ಬಾರಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದೆ. ಆದರೂ ವಿದೇಶಿ ಅಡಿಕೆ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಅಡಿಕೆ ಬೆಲೆ ತೀವ್ರವಾಗಿ ಕುಸಿದಿದೆ. ಈ ಬಗ್ಗೆ ಕಾಂಗ್ರೆಸ್ ಶೀಘ್ರ ಹೋರಾಟ ರೂಪಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಗೆ ಕಾರ್ಯಕ್ರಮಗಳಿಗೆ ಬರುವ ಸಚಿವರು ಆಯಾ ತಾಲೂಕಿನ ಶಾಸಕರಿಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮೊದಲೇ ಮಾಹಿತಿ ನೀಡಬೇಕು. ಅಲ್ಲಿಯ ಘಟಕಕ್ಕೆ ಭೇಟಿ ನೀಡಿ ಸಚಿವರು ಪಕ್ಷ ಸಂಘಟನೆ ಕುರಿತು ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೋಗಬೇಕು. ಈ ಕುರಿತು ಸೂಕ್ತ ಮಾಹಿತಿ ಎಲ್ಲ ಸಚಿವರಿಗೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾಗಿ ತಿಳಿಸಿದರು. ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ತೀ.ನ.ಶ್ರೀನಿವಾಸ್ ಮತ್ತು ಮಲ್ಲಿಕಾರ್ಜುನ್ ಹಕ್ರೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಹೋರಾಟದ ಮೂಲಕ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಅವರಿಗೆ ಉನ್ನತ ಹುದ್ದೆ ಸಿಕ್ಕಿರುವುದು ಪಕ್ಷ ಬಲವರ್ಧನೆಗೆ ಹೆಚ್ಚು ಸಹಕಾರಿಯಾಗಿದೆ. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೆ ಜಿಲ್ಲೆ ಬಿಜೆಪಿಮಯವಾಗುತ್ತದೆ ಎನ್ನುವ ಸುದ್ದಿ ಹರಡಲಾಗಿತ್ತು. ಅದು ಸಾಧ್ಯವಿಲ್ಲ ಎನ್ನುವುದು ಶಿವಮೊಗ್ಗ ಜಿಪಂ ಹಾಗೂ ಸಾಗರ, ಹೊಸನಗರ ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸಾಬೀತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯನ್ನು ಮಣಿಸುವ ನಿಟ್ಟಿನಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕಾಗಿದೆ ಎಂದರು. ಕಾಂಗ್ರೆಸ್ ಸರಕಾರ ಸೈಕಲ್ ಅವ್ವಹಾರದ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಈ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.ಇನ್ನೋರ್ವ ಅಭಿನಂದಿತರಾದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಜಿಪಂ ಸದಸ್ಯೆ ಅನಿತಾ ಕುಮಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ನಗರಸಭೆ ಅಧ್ಯಕ್ಷ ಗಣಾಧೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಾಥ್, ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷ ವೀಣಾ ಬೆಳೆಯೂರು, ಮುಹಮ್ಮದ್ ಖಾಸಿಂ ಮತ್ತಿತರರು ಉಪಸ್ಥಿತರಿದ್ದರು.