×
Ad

ಅಗ್ನಿಅನಾಹುತ: ಬೆಂಕಿ ಹತೋಟಿಗೆ ಹರಸಾಹಸ

Update: 2016-05-09 22:05 IST

ಕಾರವಾರ, ಮೇ 9: ಇಲ್ಲಿನ ಹೊರವಲಯದ ಬಿಣಗಾ ಪ್ರದೇಶದಲ್ಲಿ ಭಾರೀ ಅಗ್ನಿ ಅನಾಹುತ ರವಿವಾರ ರಾತ್ರಿ ಸಂಭವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ರವಿವಾರ ತಡರಾತ್ರಿಯವರೆಗೂ ಹರಸಾಹಸ ಪಡಬೇಕಾಯಿತು. ಸುಮಾರು 6 ಅಗ್ನಿಶಾಮಕ ವಾಹನಗಳು 8 ಗಂಟೆಗಳಿಗೂ ಹೆಚ್ಚು ಕಾಲ ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಬೆಂಕಿಯನ್ನು ಹತೋಟಿಗೆ ತಂದಿವೆ. ನಗರದ ಬಿಣಗಾದ ಘಟ್ಟಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಂತೆ ತಿರುವಿನಲ್ಲಿರುವ ಖಾಸಗಿ ಜಮೀನೊಂದರಲ್ಲಿ ಕಟ್ಟಿಗೆಯನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿ ಇಡಲಾಗಿದ್ದು, ಇಡೀ ಕಟ್ಟಿಗೆಯ ರಾಶಿಯೇ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರದೇಶವೇ ಒಂದು ರಣಾಂಗಣದಂತೆ ಕಂಡು ಬಂತು.ನಗರದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದೆಯೆನ್ನಲಾದ ಮೀನೆಣ್ಣೆ ಘಟಕದ ಉಪಯೋಗಕ್ಕಾಗಿ ಈ ಕಟ್ಟಿಗೆಯನ್ನು ದಾಸ್ತಾನು ಮಾಡಿ ಇಡಲಾಗಿತ್ತು ಎನ್ನಲಾಗಿದೆ. ಈ ಕಟ್ಟಿಗೆಯನ್ನು ಈ ಸ್ಥಳದಲ್ಲಿ ದಾಸ್ತಾನು ಮಾಡಲು ಸಂಬಂಧಿತ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿತ್ತೋ ಇಲ್ಲವೋ ಎಂಬುದು ಈವರೆಗೂ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ದಾಸ್ತಾನು ಸ್ಥಳಕ್ಕೆ ಹೊಂದಿಕೊಂಡಿರುವ ಗುಡ್ಡದಲ್ಲಿನ ಕಾಡಿಗೆ ಕೆಲ ಪ್ರವಾಸಿಗಳು ರವಿವಾರ ಪಿಕ್ನಿಕ್‌ಗೆ ಬಂದಿದ್ದರು ಎನ್ನಲಾಗಿದೆ. ಈ ವ್ಯಕ್ತಿಗಳು ಕಾಡಿನಲ್ಲಿ ಹೊತ್ತಿಸಿದ ಬೆಂಕಿ ಅಲ್ಲಿ ವ್ಯಾಪಿಸಿ ಅನಂತರ ಗುಡ್ಡಕ್ಕೆ ಹೊಂದಿಕೊಂಡಿರುವ ಕಟ್ಟಿಗೆ ದಾಸ್ತಾನಿನ ಸ್ಥಳಕ್ಕೂ ವ್ಯಾಪಿಸಿತು ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಈ ಸ್ಥಳಕ್ಕೆ ಹೊಂದಿಕೊಂಡಿರುವಂತೆ ಯಾವುದೇ ಮನೆ ಅಥವಾ ಇತರ ಕಟ್ಟಡಗಳು ಇಲ್ಲದ ಹಿನ್ನೆಲೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದ್ದಂತೆ ಅದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿವೆ. ಈ ಪ್ರದೇಶವು ಸೀಬರ್ಡ್ ನೌಕಾನೆಲೆಯ ಎದುರು ಇದ್ದು ಬೆಂಕಿಯನ್ನು ಗಮನಿಸಿದ ನೌಕಾನೆಲೆಯ ಅಗ್ನಿಶಾಮಕ ವಾಹನಗಳೂ ಅಲ್ಲಿಗೆ ಧಾವಿಸಿದ್ದು, ಸತತ 8 ಗಂಟೆಗಳ ಕಾರ್ಯಾಚರಣೆಯ ನಂತರ ರವಿವಾರ ತಡ ರಾತ್ರಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ.

ಸುದ್ದಿತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಉಜ್ವಲ ಕುಮಾರ್, ಅಪರ ಜಿಲ್ಲಾಧಿಕಾರಿ ಪ್ರಸನ್ನ, ಸಹಾಯಕ ಕಮಿಷನರ್ ಪ್ರಶಾಂತ ಕುಮಾರ, ತಹಶೀಲ್ದಾರ್, ಅರಣ್ಯ ಇಲಾಖೆಯ ಸಿಬ್ಬಂದಿ, ನೌಕಾಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಈ ಸ್ಥಳದಲ್ಲಿ ಕಟ್ಟಿಗೆ ಸಂಗ್ರಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸ್ಥಳೀಯರಿಗೆ ಆಶ್ವಾಸನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News