‘ಸ್ನೇಕ್ ಕಿರಣ್ ಬಲೆಗೆ ಅಪರೂಪದ ‘ಪಟ್ಟೆ ಕುಕ್ರಿ ಹಾವು’!
ಶಿವಮೊಗ್ಗ, ಮೇ 9: ಖ್ಯಾತ ಉರಗ ತಜ್ಞ ಸ್ನೇಕ್ ಕಿರಣ್‌ರವರು ಸೋಮವಾರ ನಗರದ ಸೋಮಿನ ಕೊಪ್ಪದ ಕೆಎಚ್‌ಬಿ ಪ್ರೆಸ್ ಕಾಲೋನಿಯಲ್ಲಿ ಅಪರೂಪದ ’ಪಟ್ಟೆ ಕುಕ್ರಿ ಹಾವ’ನ್ನು (ಬ್ಯಾಂಡೆಂಡ್ ಕುಕ್ರಿ ಅಥವಾ ಕಾಮನ್ ಕುಕ್ರಿ) ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರತ್ನ ಎಂಬುವರ ಮನೆಯ ಮುಂಭಾಗದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಬೆಳಗ್ಗೆ ಈ ಹಾವು ಕಂಡು ಬಂದಿತ್ತು. ತಕ್ಷಣವೇ ಮನೆಯವರು ಸ್ನೇಕ್ ಕಿರಣ್‌ಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್‌ರವರು ತೊಟ್ಟಿಯ ನೀರಿನಲ್ಲಿದ್ದ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.
ತದನಂತರ ಪರಿಶೀಲನೆ ನಡೆಸಿದಾಗ ಇದು ವಿಷರಹಿತ ಹಾವುಗಳ ಜಾತಿಗೆ ಸೇರಿದ ‘ಪಟ್ಟೆ ಕುಕ್ರಿ’ ಹಾವು ಎಂಬುವುದು ತಿಳಿದು ಬಂದಿದೆ. ಈ ಹಾವು ಬಹಳ ಅಪರೂಪವಾಗಿ ಕಂಡುಬರುತ್ತದೆ. ಅದರಲ್ಲಿಯೂ ಶಿವಮೊಗ್ಗದಂತಹ ನಗರಗಳಲ್ಲಿ ವಿರಳಾತೀವಿರಳವಾಗಿದೆ ಎಂದು ಸ್ನೇಕ್ ಕಿರಣ್‌ಪತ್ರಿಕೆಗಳಿಗೆ ಮಾಹಿತಿ ನೀಡಿದರು.
‘ಈ ಹಾವು ಸರಿಸುಮಾರು ಒಂದೂವರೆ ಅಡಿಯಷ್ಟು ಉದ್ದವಿದ್ದು, ತೆಳುವಾಗಿದೆ. ಕೆರೆ ಹಾವಿನ ರೀತಿಯಲ್ಲಿ ಈ ಹಾವು ಕೂಡ ವಿಷರಹಿತವಾದುದಾಗಿದೆ. ಕಚ್ಚಿದರೂ ಯಾವುದೇ ಅನಾಹುತವಿಲ್ಲವಾಗಿದೆ’ ಎಂದು ಸ್ನೇಕ್ ಕಿರಣ್‌ರವರು ತಿಳಿಸಿದ್ದಾರೆ. ‘ಜೈವಿಕ ವ್ಯವಸ್ಥೆಯಲ್ಲಿ ಹಾವುಗಳು ಅಪರೂಪದ ಜೀವ ಪ್ರಭೇದವಾಗಿದೆ. ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲಬಾರದು. ನಿಮ್ಮ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಹಾವುಗಳು ಕಂಡುಬಂದಲ್ಲಿ ತಮಗೆ ಮಾಹಿತಿ ನೀಡಿದರೆ, ಸುರಕ್ಷಿತವಾಗಿ ಸೆರೆ ಹಿಡಿದು ಅದನ್ನು ಸ್ಥಳಾಂತರಿಸುವ ಕೆಲಸ ಮಾಡಲಾಗುವುದು ಎಂದು ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ. ಸ್ನೇಕ್ ಕಿರಣ್‌ರವರ ಮೊಬೈಲ್ ಸಂಖ್ಯೆ : 94800-23580 ಗೆ ಸಂಪರ್ಕಿಸಬಹುದಾಗಿದೆ.