ಸುಡು ಬಿಸಿಲಿನಿಂದ ತತ್ತರಿಸಿದ ಮಲೆನಾಡು
ಅಝೀಝ್ ಕಿರುಗುಂದ
ಚಿಕ್ಕಮಗಳೂರು, ಮೇ 9: ಹಚ್ಚ ಹಸಿರಿನ ವನಸಿರಿ, ಸದಾ ತಂಗಾಳಿಯಿಂದ ಕೂಡಿ ರುತ್ತಿದ್ದ ಮಲೆನಾಡಿನ ಭಾಗವಾದ ಚಿಕ್ಕಮ ಗಳೂರು ಜಿಲ್ಲೆಯು ಬಿಸಿಲ ಧಗೆಯಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಪಶ್ವಿಮ ಘಟ್ಟ ಇದೀಗ ಕೆಂಡದ ಮೇಲಿನ ಕಾವಲಿಯಂತಾಗಿ ಹೋಗಿದೆ. ಬಿಸಿಲಿನ ಬೇಗೆಗೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಗಿಡಗಳು ಹಾಗೂ ಮೆಣಸಿನ ಬಳ್ಳಿಗಳು ಒಣಗಿ ಹೋಗುತ್ತಿವೆೆ. ಇದರಿಂದ ಬೆಳೆಗಾರರಲ್ಲಿ ಆತಂಕ ಮಡುಗಟ್ಟಿದೆ.
ಕಾಫಿ ನಾಡು ಎಂದು ಪ್ರಖ್ಯಾತಿ ಪಡೆದಿರುವ ಚಿಕ್ಕಮ ಗಳೂರು ಜಿಲ್ಲೆಯಲ್ಲಿ ಸದ್ಯ ಬಿಸಿಲ ಬೇಗೆಗೆ ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ಒಣಗುತ್ತಿವೆ. ಆದರೆ ಮಲೆ ನಾಡು ಭಾಗದಲ್ಲಿ ಈ ಪರಿ ಬಿಸಿಲ ಝಳ ಕಾಡುತ್ತದೆ ಎಂದು ಜನರು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆ ಯಲ್ಲಿ ಬಿಸಿಲಿನ ತಾಪ ಅಧಿಕವಾಗಿದೆ. ಉರಿ ಬಿಸಿಲು ಬಯಲುಸೀಮೆಯನ್ನು ನೆನಪಿಸುತ್ತಿದೆ.
ಆನರಿಗೆ ಮನೆಯೊಳ ಗಿನಿಂದ ಹೊರಗೆ ಕಾಲಿಡ ಲಾಗುತ್ತಿಲ್ಲ. ಮನೆಯೊಳಗೂ ಬೆವರು ಕಿತ್ತು ಬರುತ್ತಿದೆ. ವಿದ್ಯುತ್ ಅಭಾವದಿಂದ ಫ್ಯಾನ್ ತಿರುಗದಿದ್ದರೆ ಮನೆಯೊಳಗೆ ಕುಳಿತುಕೊಳ್ಳಲೂ ಸಾಧ್ಯವಾ ಗದಂತಹ ವಾತಾವರಣ ನಿರ್ಮಾಣವಾಗಿದೆ. ಕಳೆದ ಫೆಬ್ರವರಿಯಲ್ಲಿ 35 ಡಿಗ್ರಿಯಷ್ಟಿದ್ದ ತಾಪ ಮಾನ ಕೆಲವು ದಿನಗಳ ಹಿಂದೆ 38 ಡಿಗ್ರಿ ದಾಟಿ ನಿಂತಿತ್ತು. ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚುತ್ತಿದ್ದು, ನದಿ, ತೊರೆ, ಹಳ್ಳಗಳು ಬತ್ತಿ ಹೋಗುತ್ತಿವೆ. ಕೊಳವೆ ಬಾವಿಗಳ ಪ್ರಮಾಣ ತ್ವರಿತಗತಿಯಲ್ಲಿ ಹೆಚ್ಚುತ್ತಿದ್ದು ಅಂತರ್ಜಲಮಟ್ಟ ಕುಸಿತ ಕಂಡಿದೆ.
ಇಂತಹ ಸಮಯದಲ್ಲಿ ವಾಣಿಜ್ಯ ಬೆಳೆಯಾದ ಕಾಫಿ ಗಿಡ ಮತ್ತು ಉಪಬೆಳೆಯಾದ ಮೆಣಸು ಬಿಸಿಲಿಗೆ ಸುಟ್ಟು ಹೋಗುತ್ತಿವೆ. ಇದರಿಂದ ಪ್ರತಿ ವರ್ಷದದಂತೆ ಫಸಲಿಗಾಗಿ ಕಾಯುತ್ತಿರುವ ಬೆಳೆಗಾರರ ನೆಮ್ಮದಿ ಕದಡಿದಂತಾಗುತ್ತಿದೆ. ಕಳೆದ ವರ್ಷ ಜನವರಿಯಿಂದ ಮಾರ್ಚ್‌ವರೆಗೆ ವಾಡಿಕೆಗೂ ಮೀರಿ ಮಳೆ ಬಿದ್ದಿತ್ತು. ಆಗ ಅವಧಿಗೂ ಮುನ್ನ ಕಾಫಿ ಗಿಡಗಳು ಹೂವು ಬಿಟ್ಟಿದ್ದವು. ಆದರೆ ಈ ಬಾರಿ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿ ತೋಟಗಳಲ್ಲಿ ಉಪಬೆಳೆಂಾಗಿ ಕಂಗೊಳಿಸುತ್ತಿದ್ದ ಮೆಣಸಿನ ಬಳ್ಳಿಗಳು ಸಂಪೂರ್ಣ ಒಣಗಿ ಹೋಗುತ್ತಿವೆ.
ಮೆಣಸಿನ ಬಳ್ಳಿಗಳು ಹೆಚ್ಚಾಗಿ ಮಲೆನಾಡು ಭಾಗದಲ್ಲಿ ಸಿಲ್ವರ್ ಮರಗಳಲ್ಲಿ ಹಸನಾಗಿದೆ. ಇದು ಕಾಫಿ ಗಿಡಗಳಿಗಿಂತ ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುತ್ತವೆ. ಮೆಣಸಿನ ಬಳ್ಳಿಗಳು ಒಣಗುವುದರಿಂದ ಸಿಲ್ವರ್ ಮರಗಳಿಗೂ ಕೂಡ ಹಾನಿಯುಂಟಾಗುತ್ತಿವೆ ಎನ್ನುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ತೇವಾಂಶ ಕಡಿಮೆಯಾದಂತೆ ಗೆದ್ದಲು ಹುಳುಗಳ ಬಾಧೆೆ ಅಧಿಕಗೊಳ್ಳುವ ಭೀತಿ ಇದೆ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕೇವಲ ಅರ್ಧ ಡಿಗ್ರಿ ಉಷ್ಣಾಂಶಗಳ ಏರಿಳಿತಗಳು ಕಾಫಿ ಬೆಳೆಗೆ ಮಾರಕವಾಗುವ ಅಪಾಯವಿದೆ.
ಮಳೆ ಸರಿಯಾಗಿ ಬಾರದಿದ್ದರೆ ಖಂಡಿತಾ ಈ ಸಲ ಈ ಭಾಗಗಳ ರೈತರು ಮತ್ತು ಬೆಳೆಗಾರರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ.