ಸಂವಿಧಾನ ಮೂಲ ರೂಪದಲ್ಲೇ ಅನುಷ್ಠಾನಗೊಳ್ಳಲಿ: ಪತ್ರಕರ್ತ ಬಿ.ತಿಪ್ಪೇರುದ್ರಪ್ಪ
ಚಿಕ್ಕಮಗಳೂರು, ಮೇ 9: ಅಂಬೇಡ್ಕರ್ ಅವರ ಆಶಯ ಮತ್ತು ಕನಸುಗಳು ನನಸಾಗಬೇಕಾದರೆ ಅವರು ರಚಿಸಿರುವ ಸಂವಿಧಾನದ ಮೂಲ ರೂಪದಲ್ಲೇ ಅನುಷ್ಠಾನಗೊಳಿಸಬೇಕು ಎಂದು ಪತ್ರಕರ್ತ ಬಿ.ತಿಪ್ಪೇರುದ್ರಪ್ಪಸಲಹೆ ಮಾಡಿದ್ದಾರೆ. ತಾಲೂಕಿನ ಕಡಬಗೆರೆಯಲ್ಲಿ ಸ್ಥಳೀಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಅಸ್ಪಶ್ಯತೆ ನಿವಾರಣೆ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ದೊರೆಯಬೇಕೆಂದು ಕನಸು ಕಂಡಿದ್ದರು. ಅದರಂತೆ ಸಂವಿಧಾನವನ್ನು ರಚಿಸಿದ್ದರು. ಆದರೆ ಸಂವಿಧಾನ ಅನುಷ್ಠಾನಗೊಂಡು 75 ವರ್ಷಗಳು ಕಳೆದರೂ ಸಂವಿಧಾನ ಶಿಲ್ಪಿಯ ಆಶಯಗಳು ಈಡೇರಿಲ್ಲ ಎಂದು ವಿಷಾದಿಸಿದರು.
ಅಂಬೇಡ್ಕರ್ ಅವರು ಭೂ ರಾಷ್ಟ್ರೀಕರಣವಾಗಬೇಕೆಂದು ಬಯಸಿದ್ದರು. ಆದರೆ ಇದುವರೆಗೂ ಆ ಕೆಲಸವಾಗಿಲ್ಲ ಬಡವರಿಗೆ ದಲಿತರಿಗೆ ಭೂಮಿ ದೊರೆತಿಲ್ಲ. ಸಮಾಜದಲ್ಲಿ ಅಸ್ಪಶ್ಯತೆ ಅಸಮಾನತೆ ಜಾತೀಯತೆ, ದೌರ್ಜನ್ಯ, ಶೋಷಣೆಗಳು ನಿಂತಿಲ್ಲ. ಇದಕ್ಕೆ ಮೂಲ ಕಾರಣ ಸಂವಿಧಾನವನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತಾರದಿರುವುದು ಎಂದರು.
ಸಂವಿಧಾನಕ್ಕೆ ಇದುವರೆಗೂ ಅನೇಕ ಬಾರಿ ತಿದ್ದುಪಡಿಗಳಾಗಿವೆ. ಇದರಿಂದಾಗಿ ದೇಶದಲ್ಲಿಂದು ಪ್ರಜಾಪ್ರಭುತ್ವ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ಸಾಗುತ್ತಿದೆ. ದಲಿತರು ಬಡವರು ಹಿಂದುಳಿದವರು ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಬೇಕಾದರೆ ಸಂವಿಧಾನದ ತಿದ್ದುಪಡಿ ಕೈಬಿಟ್ಟು ಮೂಲರೂಪದಲ್ಲೇ ಅನುಷ್ಠಾನಗೊಳಿಸಬೇಕು ಎಂದರು.
ಗೌರಿಬಿದನೂರಿನ ಕನ್ನಡ ಪ್ರಾಧ್ಯಾಪಕ ಡಾ. ರಮೇಶ್‌ಚಂದ್ರದತ್ತ ಮಾತನಾಡಿ, ಅಂಬೇಡ್ಕರ್ ಅವರ ಹೆಸರು ಮತ್ತು ಜಯಂತಿ ಇಂದು ಸ್ವಾರ್ಥಿಗಳ ಗಳಿಕೆಯ ಸರಕಾಗುತ್ತಿದೆ. ಅಂಬೇಡ್ಕರ್ ಅವರನ್ನು ಮತ್ತು ಅವರ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದವರೇ ಇಂದು ಅಂಬೇಡ್ಕರ್ ಜಯಂತಿಯನ್ನು ಮನೆಮನೆಗಳಲ್ಲಿ ಆಚರಿಸುತ್ತಿದ್ದಾರೆ. ಇದರ ಹಿಂದಿನ ಮನುವಾದಿಗಳ ಅಜೆಂಡಾವನ್ನು ಅರ್ಥ ಮಾಡಿಕೊಳ್ಳದಿದ್ದರೆ ದಲಿತರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಕಾರ್ಯಕ್ರಮದ ರೂವಾರಿ ಎಸ್.ಪೇಟೆ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ದಲಿತ ವರ್ಗಕ್ಕೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾ ತಂಡಗಳ ಕೂಡುವಿಕೆಯೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಅಲ್ಲದೆ, ಕ್ರಾಂತಿಗೀತೆ ಗಾಯನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ದೇವ ದಾನ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸದಸ್ಯರಾದ ರಾಜ್‌ಕುಮಾರ್, ದಿನೇಶ್, ಸುಂದರೇಶ್, ರಾಧಾ, ಇಂದಿರಾ, ರಮೇಶ್, ಅಂಬಿಕಾ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜರತ್ನಂ ಉಪಸ್ಥಿತರಿದ್ದರು.