×
Ad

ಸಹಕಾರಿ ಬ್ಯಾಂಕ್‌ಗಳು ಉದ್ಯೋಗ ಸೃಷ್ಟಿಸಬೇಕು: ಸಚಿವ ಎಚ್.ಕೆ.ಪಾಟೀಲ್

Update: 2016-05-09 22:20 IST

ಸಾಗರ, ಮೇ 9: ಸಹಕಾರಿ ಸಂಸ್ಥೆಗಳು ಸಾಲಕೊಟ್ಟು ಸಾಲ ಪಡೆಯುವ ಸೀಮಿತ ಚಟುವಟಿಕೆಗೆ ಸೀಮಿತವಾಗದೆ, ಸಂಸ್ಥೆಗಳ ಮೂಲಕ ಸಾಲ ನೀಡಿ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಗಣಪತಿ ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಹಕಾರಿ ಬ್ಯಾಂಕ್‌ಗಳು ಬೆಳೆಯಲು ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರಕಾರದ ಅನೇಕ ನೀತಿಗಳು ಅಡ್ಡಿಯುಂಟು ಮಾಡುತ್ತಿದೆ. ಕಂಪ್ಯೂಟರ್ ಅಳವಡಿಸಿ, ಕಟ್ಟಡ ಕಟ್ಟಿ ಎನ್ನುವ ನಿಯಮಗಳನ್ನು ಮುಂದಿಟ್ಟುಕೊಂಡು ಹೊಸ ಶಾಖೆಗಳನ್ನು ತೆರೆಯಲು ಅವಕಾಶ ಕಲ್ಪಿಸುತ್ತಿಲ್ಲ. ಇಂತಹ ಹೊತ್ತಿನಲ್ಲಿ ಸಹಕಾರಿ ಬ್ಯಾಂಕ್‌ಗಳು ಹೆಚ್ಚು ಜಾಗೃತವಾಗಿ ಇರಬೇಕು ಎಂದು ಕಿವಿಮಾತು ಹೇಳಿದರು.

 ಮೂರೂವರೆ ಲಕ್ಷ ಕೋಟಿ ರೂ. ಬಂಡವಾಳ ಹೊಂದಿರುವ ಸಹಕಾರಿ ಬ್ಯಾಂಕ್‌ಗಳು ಸುಮಾರು 1 ಲಕ್ಷ ಕೋಟಿ ಗೂ ಹೆಚ್ಚು ಹಣವನ್ನು ಸಹಕಾರಿ ಕ್ಷೇತ್ರದಿಂದ ಸರಕಾರಿ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಸಹಕಾರಿ ಬ್ಯಾಂಕ್‌ಗಳನ್ನು ಸಣ್ಣವರನ್ನಾಗಿ ಮಾಡುವ ಕೆಲಸ ರಿಸರ್ವ್ ಬ್ಯಾಂಕ್ ಮಾಡಬಾರದು ಎಂದರು.

ರಾಜ್ಯದಲ್ಲಿ 266 ಸಹಕಾರಿ ಮತ್ತು ಅರ್ಬನ್ ಬ್ಯಾಂಕ್‌ಗಳಿದ್ದು, 1000ಕ್ಕೂ ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಸುಮಾರು 23 ಸಾವಿರ ಕೋಟಿ ರೂ. ಬಂಡವಾಳ ಹೂಡಿದ್ದು, ನಿವ್ವಳ ಲಾಭ 467 ಕೋಟಿ ರೂ. ಇದೆ. ಸರಕಾರದ ಅನುದಾನಗಳನ್ನು ಪಡೆಯದೆ ಸಹಕಾರಿ ಬ್ಯಾಂಕ್‌ಗಳು ಷೇರುದಾರರು ಮತ್ತು ಗ್ರಾಹಕರ ಸ್ವಂತ ಸಾಮರ್ಥ್ಯದಿಂದ ಬೆಳೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

 ಇಂದಿಗೂ ಸರಕಾರಕ್ಕೆ ಅರ್ಬನ್ ಬ್ಯಾಂಕ್‌ಗಳ ಬಗ್ಗೆ ನಂಬಿಕೆ ಇಲ್ಲ. ನಮ್ಮ ಬೆಳವಣಿಗೆ ಖಾಸಗಿ, ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್‌ಗಿಂತ ಉನ್ನತವಾದುದು. ಸೇವಾ ಕ್ಷೇತ್ರದಲ್ಲಿ ನಿರಂತರತೆ ಕಾಯ್ದುಕೊಂಡಿದೆ ಎಂದು ತಿಳಿಸಿದರು.

  ಶತಮಾನೋತ್ಸವ ಅಂಗವಾಗಿ ಹೊರತರಲಾದ ‘ನಡೆ-ನೂರು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಆಧುನಿಕ ಯುಗದಲ್ಲಿ ನಾವು ಅದಕ್ಕೆ ತಕ್ಕಂತೆ ಸಹಕಾರಿ ಸಂಸ್ಥೆಗಳು ಬದಲಾಗಬೇಕು. ಹಣಕಾಸಿನ ವಹಿವಾಟು ಮಾತ್ರ ನಿಮ್ಮ ಉದ್ದೇಶವಾಗದೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ, ಹೈನುಗಾರಿಕೆ, ಸ್ವಯಂ ಉದ್ಯೋಗ, ಸಣ್ಣ ಕೈಗಾರಿಕೆ, ಗುಡಿಗಾರಿಕೆ, ಉಪ ಕಸುಬುಗಳಿಗೆ ಸಾಲಸೌಲಭ್ಯವನ್ನು ನೀಡುವತ್ತ ಬ್ಯಾಂಕ್ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಯು.ಎಲ್.ಸುಭಾಸ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ಸದಸ್ಯ ತೀ.ನ.ಶ್ರೀನಿವಾಸ್, ಬ್ಯಾಂಕ್ ಉಪಾಧ್ಯಕ್ಷ ನಾರಾಯಣ ಅರಮನೆಕೇರಿ, ನಿರ್ದೇಶಕರಾದ ಎಂ.ಎಸ್.ಗೌಡರ್, ಸರಸ್ವತಿ ನಾಗರಾಜ್, ಕೃಷ್ಣಮೂರ್ತಿ ಭಂಡಾರಿ, ವಿ.ಶಂಕರ್, ಡಿಶ್ ಗುರು, ಎಸ್.ಗಜಾನನ ಜೋಯಿಸ್, ರಂಗಧೋಳ್ ವಿನಾಯಕ ರಾವ್, ಬಿ.ದೇವೇಂದ್ರ, ಶೋಭಾ ಲಂಬೋಧರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News