ತಿಪ್ಪೆಗುಂಡಿಯಲ್ಲಿ ಶವ ಹೂತು ಹಾಕಿ ಹಂತಕರು ಪರಾರಿ!
ಶಿವಮೊಗ್ಗ, ಮೇ 9: ಯುವಕನ ತಲೆ, ಮುಖವನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ನಡೆಸಿದ ಹಂತಕರು ಮೃತದೇಹವನ್ನು ತಿಪ್ಪೆಗುಂಡಿಯೊಂದರಲ್ಲಿ ಹೂತು ಹಾಕಿ ಪರಾರಿಯಾಗಿರುವ ಘಟನೆ ನಗರದ ಹೊರವಲಯ ಆಲ್ಕೋಳ ಬಡಾವಣೆಯ ವಿಕಾಸ ಶಾಲೆಯ ಸಮೀಪದಲ್ಲಿ ನಡೆದಿದ್ದು, ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ನಗರದ ಹೊರವಲಯ ಪುರಲೆಯ ನಿವಾಸಿ ರವಿ (33) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಾರೆ ಕೆಲಸ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಆತನ ಹಿನ್ನೆಲೆಯ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ. ಬರ್ಬರ ಹತ್ಯೆ: ಭಾನುವಾರ ತಡರಾತ್ರಿ ಈ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ತಲೆ, ಮುಖವನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಹತ್ಯೆ ನಡೆಸಲಾಗಿದೆ. ಇದರಿಂದ ಮುಖದ ಗುರುತು ಹಿಡಿಯಲು ಸಾಧ್ಯವಾಗದಂತಾಗಿದೆ. ಹತ್ಯೆಯ ತದನಂತರ ಸೆಗಣಿ ಹಾಕಿದ್ದ ತಿಪ್ಪೆಗುಂಡಿಯೊಂದರಲ್ಲಿ ಶವವನ್ನು ಹೂತಿಟ್ಟು ಹಂತಕರು ಪರಾರಿಯಾಗಿದ್ದಾರೆ. ಸೋಮವಾರ ತಿಪ್ಪೆಗುಂಡಿಯಲ್ಲಿ ಕಾಲುಗಳನ್ನು ನೋಡಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತನು ತೊಟ್ಟಿದ್ದ ಶರ್ಟ್ ಕಾಲರ್‌ನಲ್ಲಿದ್ದ ಟೈಲರ್ ಅಂಗಡಿಯ ಸ್ಟಿಕರ್ ಮೂಲಕ ಆತನ ಪೂರ್ವಾಪರ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನಗರದ ಹೊರವಲಯ ಪುರಲೆಯ ನಿವಾಸಿ ರವಿ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್ಪಿ ಡಾ.ರಾಮ್ ಎಲ್. ಅರೆಸಿದ್ಧಿ, ಪೊಲೀಸ್ ನಿರೀಕ್ಷಕ ಕೆ.ಟಿ.ಗುರುರಾಜ್, ಉಪನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ಮತ್ತು
ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಗೂಢ?: ಸರಿ ಸುಮಾರು ಮೂರರಿಂದ ನಾಲ್ಕು ಜನರಿದ್ದ ತಂಡ ಈ ಹತ್ಯೆ ನಡೆಸಿರುವ ಅನುಮಾನಗಳಿವೆ. ಈ ಹತ್ಯೆಗೆ ಕಾರಣವೇನು? ಹಂತಕರ್ಯಾರು? ಎಂಬುವುದು ನಿಗೂಢವಾಗಿದೆ. ಪೊಲೀಸರ ತನಿಖೆಯಿಂದ ಇನ್ನಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ. ಬೆಚ್ಚಿಬಿದ್ದ ನಿವಾಸಿಗಳು: ಯುವಕನ ಬರ್ಬರ ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಆಲ್ಕೋಳ, ಗಾಡಿಕೊಪ್ಪ ಸುತ್ತಮುತ್ತಲಿನ ನೂರಾರು ನಿವಾಸಿಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದರು. ಈ ಹತ್ಯೆಯು ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಲ್ಲಿ ತಲ್ಲಣ ಸೃಷ್ಟಿಸುವಂತೆ ಮಾಡಿತ್ತು.
ತನಿಖೆ ಚುರುಕು: ತಮ್ಮ ನೇರ, ನಿರ್ಭೀತ ಕಾರ್ಯವೈಖರಿಯ ಮೂಲಕ ‘ಟಪ್‌ಕಾಪ್’ ಪೊಲೀಸ್ ಅಧಿಕಾರಿ ಎಂದು ಹೆಸರು ಸಂಪಾದಿಸಿರುವ ನಿರೀಕ್ಷಕ ಕೆ.ಟಿ. ಗುರುರಾಜ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್‌ರವರು ಈ ಹತ್ಯೆಯ ತನಿಖೆ ನಡೆಸುತ್ತಿದ್ದು, ಆರೋಪಿಗಳ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.