×
Ad

ಕುಶಾಲನಗರ: ಮುಳ್ಳುಸೋಗೆ ಪಂಚಾಯತ್ ಗ್ರಾಮ ಸಭೆ

Update: 2016-05-10 21:40 IST

ಕುಶಾಲನಗರ, ಮೇ 10: ಇಲ್ಲಿನ ಸಮೀಪದ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಭವ್ಯಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾರಂಭದಲ್ಲಿ ಮುಳ್ಳುಸೋಗೆ ಗ್ರಾಪಂ ಮೊದಲನೆ ವಾರ್ಡ್‌ನ ಕುಮಾರ್ ಎಂಬವರು ಗ್ರಾಮಸಭೆಗೆ ಗ್ರಾಮಸ್ಥರ ಸಂಖ್ಯೆ ಕಡಿಮೆಯಿದ್ದು, ಸಭೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಅವರು ವಾರ್ಡ್ ಸಭೆಯಲ್ಲಿ ನಡೆದ ವರದಿಯನ್ನು ಸಭೆಯಲ್ಲಿ ಮಂಡಿಸಿ, ವಾರ್ಡ್‌ನ ಕಾಮಗಾರಿಗಳ ಪಟ್ಟಿಯನ್ನು ಗ್ರಾಮಸ್ಥರಿಗೆ ಓದಿ ತಿಳಿಸಬೇಕು. ಮೊದಲನೆ ವಾರ್ಡ್‌ನಲ್ಲಿ ಅನೇಕ ಸಮಸ್ಯೆಗಳಿದ್ದು, ಅದರಲ್ಲಿ ಮುಖ್ಯವಾಗಿ ಮುಖ್ಯ ರಸ್ತೆಯಿಂದ ಮುಳ್ಳುಸೋಗೆ ಅಡ್ಡರಸ್ತೆಯವರೆಗೆ ರಸ್ತೆ ಅಗಲೀಕರಣದ ವಿಷಯವಾಗಿ ಚರ್ಚಿಸಿದರು.

ಸಾಗರ್ ಎಂಬವರು ಮಾತನಾಡಿ, ಕೋಳಿ ಅಂಗಡಿಗಳಲ್ಲಿನ ತ್ಯಾಜ್ಯಗಳನ್ನು ಕಾವೇರಿ ನದಿಯ ದಂಡೆಯಲ್ಲಿ ಸುರಿಯುತ್ತಿರುವುದರಿಂದ ದುರ್ವಾಸನೆ ಬರುತ್ತಿರುವುದರಿಂದ ತ್ಯಾಜ್ಯ ಇಲ್ಲಿ ಹಾಕಿರುವುದು ಸರಿಯಾದ ಕ್ರಮವಲ್ಲ ಎಂದರು. ಟೆಂಡರ್‌ದಾರರಿಗೆ ಸೂಚನೆ ನೀಡಿದಂತೆ ಕೋಳಿ ಅಂಗಡಿಯವರಿಗೆ ವ್ಯವಸ್ಥಿತವಾದ ಕಟ್ಟಡವನ್ನು ನಿರ್ಮಿಸಿ, ತ್ಯಾಜ್ಯವನ್ನು ಬೇರೆಡೆಗೆ ವಿಲೇವಾರಿ ಮಾಡುವ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಗ್ರಾಪ ಅಧ್ಯಕ್ಷೆ ಭವ್ಯಾ ಮಾತನಾಡಿ, ವಾರ್ಡ್‌ಸಭೆಯಲ್ಲಿ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಕುಡಿಯುವ ನೀರಿನ ವ್ಯವಸ್ಥೆಗೆ ಟ್ಯಾಂಕರ್‌ನಲ್ಲಿ ಇಂದಿನಿಂದಲೇ ನೀರನ್ನು ಒದಗಿಸುವ ಕ್ರಮಕ್ಕೆ ಸಜ್ಜಾಗುತ್ತೇವೆ ಎಂದರು.

ಸಭೆಯಲ್ಲಿ ಹಾಜರಿದ್ದ ಬಸವೇಶ್ವರ ಬಡಾವಣೆಯ ಗ್ರಾಮಸ್ಥರು ಈ ಬಡಾವಣೆಗೆ ಕಳೆದ ಎರಡು ವರ್ಷಗಳಿಂದಲೂ ನೀರು ಬರುತ್ತಿಲ್ಲ. ಈ ವಿಚಾರವಾಗಿ ಅನೇಕ ಬಾರಿ ಗ್ರಾಪಂಗೆ ತಿಳಿಸಲಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಅನೇಕ ನೀರಿನ ಪೈಪ್‌ಗಳು ಒಡೆದುಹೋಗಿ ನೀರು ಪೋಲಾಗುತ್ತಿದೆ ಎಂದರು.

ವಾರ್ಡ್ ಸಭೆಗಳಲ್ಲಿ ವಾರ್ಡ್‌ನ ಅಭಿವೃದ್ಧಿಯ ಬಗ್ಗೆ ಚರ್ಚೆ ಹಾಗೂ ಕಾಮಗಾರಿಗಳ ಬಗ್ಗೆ ಪಟ್ಟಿಯನ್ನು ತಯಾರಿಸಲಾಗಿದ್ದು, ಇನ್ನುಳಿದ ವಿಚಾರಗಳು ಇದ್ದಲ್ಲಿ ಈ ಗ್ರಾಮಸಭೆಯಲ್ಲಿ ಚರ್ಚಿಸಿ, ಕ್ರಿಯಾಯೋಜನೆಗೆ ಸೇರಿಸಲು ಹಾಜರಿದ್ದ ಗ್ರಾಮಸ್ಥರುಗಳಲ್ಲಿ ಆಯಾಯಾ ವಾರ್ಡ್‌ನ ಸದಸ್ಯರುಗಳು ಮನವಿ ಮಾಡಿದರು. ಈ ಸಂದರ್ಭ ಹಾಜರಿದ್ದ ಗ್ರಾಮಸ್ಥರು ವಾರ್ಡುವಾರು ಕಾಮಗಾರಿಗಳ ಪಟ್ಟಿಯ ಸೇರ್ಪಡೆಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಸದಸ್ಯೆ ಮಂಜುಳಾ ಮಾತನಾಡುತ್ತಾ, ಗ್ರಾಮ ಸಭೆಯಲ್ಲಿ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಆಯಾ ವಾರ್ಡ್‌ನ ಸಮಸ್ಯೆಗಳ ಹಾಗೂ ಕಾಮಗಾರಿಗಳ ಪಟ್ಟಿಯು ಇದೀಗ ಸಭೆಯಲ್ಲಿ ಚರ್ಚೆಗೊಂಡಿದ್ದು, ಜಿಪಂ ವತಿಯಿಂದ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಜಿಪಂನ ಪ್ರಥಮ ಸಭೆಯಲ್ಲಿ ಚರ್ಚಿಸಿ ಹೆಚ್ಚು ಅನುದಾನವನ್ನು ಮುಳ್ಳುಸೋಗೆ ಗ್ರಾಪಂ ಕಾಮಗಾರಿಗಳಿಗೆ ನೀಡುವುದರ ಮೂಲಕ ಮುಖ್ಯ ಸಮಸ್ಯೆಯಾಗಿರುವ ಕುಡಿಯುವ ನೀರಿನ ವ್ಯವಸ್ಥೆಗೆೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ನಮ್ಮ ಗ್ರಾಮ ನಮ್ಮ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಸಭೆಯಲ್ಲಿ ನಿರ್ಣಯಗೊಂಡ ಕಾಮಗಾರಿಗಳ ಪಟ್ಟಿಯನ್ನು ಅನುಮೋದಿಸುವ ಮೂಲಕ ಕ್ರಿಯಾಯೋಜನೆಗಳ ಬಗ್ಗೆ ಸಭೆಗೆ ತಿಳಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷ ತಾರನಾಥ್, ನೋಡಲ್ ಅಧಿಕಾರಿ ತಾಲೂಕು ಅಕ್ಷರ ದಾಸೋಹದ ಹೇಮಂತ್‌ಕುಮಾರ್ ಸೇರಿದಂತೆ ಗ್ರಾಪಂನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News