ಡೆಲ್ಟ್ ಮೂಲಕ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ
ಮಡಿಕೇರಿ, ಮೇ 10: ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆಯನ್ನು ಡೆಲ್ಟ್ ಮೂಲಕ ಶೀಘ್ರ ಆರಂಭಿಸಲು ನಗರಸಭೆಯ ವಿಶೇಷ ಸಭೆ ನಿರ್ಣಯ ಕೈಗೊಂಡಿದೆ. ಸರಕಾರದಿಂದ ಬಿಡುಗಡೆಯಾಗಿರುವ 3.75 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಖಾಸಗಿ ಬಸ್ ನಿಲ್ದಾಣದ ಯೋಜನೆಯ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಪೌರಾಯುಕ್ತರಾದ ಬಿ.ಬಿ. ಪುಷ್ಪಾವತಿ ಮಾತನಾಡಿ, ಈ ಹಿಂದೆಯೆ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ 5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತುತ ಶೇ. 50ರಷ್ಟು ಅನುದಾನವನ್ನು ಆರಂಭದಲ್ಲಿ ಬಿಡುಗಡೆ ಮಾಡಿ ಇನ್ನೂ ಶೇ. 25ರಷ್ಟು ನಗರಾಭಿವೃದ್ಧಿ ಇಲಾಖೆ ಒದಗಿಸಲಿದೆ. ಒಟ್ಟಾಗಿ 3.75 ಕೋಟಿ ರೂ. ಅನುದಾನ ಲಭ್ಯವಾಗಿದ್ದು, ಟೆಂಡರ್ ಪ್ರಕ್ರಿಯೆಯನ್ನು ಇಲಾಖೆಗೆ ಕಳುಹಿಸಿ ಕೊಡಬೇಕಾಗಿದೆಯೆಂದು ತಿಳಿಸಿದರು.
ಅಧ್ಯಕ್ಷೆ ಶ್ರೀಮತಿ ಬಂಗೇರ ಮಾತನಾಡಿ, ಲಭ್ಯ ಅನುದಾನದಲ್ಲಿ ಕಾಮಗಾರಿಯನ್ನು ಶೀಘ್ರ ಆರಂಭಿಸುವ ಅಗತ್ಯತೆ ಇರುವುದಾಗಿ ತಿಳಿಸಿದರು. ಈ ಹಂತದಲ್ಲಿ ಒಟ್ಟು ಯೋಜನೆಯಲ್ಲಿ ನಗರಸಭೆ ಭರಿಸಬೆೇಕಾಗಿರುವ 1.25 ಕೋಟಿಯನ್ನು ಎಲ್ಲಿಂದ ಕ್ರೋಢೀಕರಿಸುತ್ತೀರ ಎಂದು ಸದಸ್ಯರು ಕೇಳಿದ ಪ್ರಶ್ನೆಗೆ ಪೌರಾಯುಕ್ತರು, ನಗರೋತ್ಥಾನ 3ನೆ ಹಂತದ ಅನುದಾನವನ್ನು ಬಳಸಿಕೊಳ್ಳಬಹುದೆಂದು ತಿಳಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಪ್ರಕಾಶ್, ನಗರೋತ್ಥಾನಕ್ಕೆ ಬರುವ ಅನುದಾನವನ್ನು ಬೃಹತ್ ಯೋಜನೆಗಳಿಗೆ ಬಳಸಿದಲ್ಲಿ ವಾರ್ಡ್‌ವಾರು ಕಾಮಗಾರಿ ನಡೆಸಲು ಸಾಧ್ಯವಾಗಲಾರದೆಂದು ತಿಳಿಸಿದರು. ಇದಕ್ಕೆ ಇತರ ಸದಸ್ಯರು ತಮ್ಮ ಸಹಮತ ವ್ಯಕ್ತಪಡಿಸಿದರು.
ಸದಸ್ಯ ಉಣ್ಣಿಕೃಷ್ಣ ಮಾತನಾಡಿ, ಖಾಸಗಿ ಬಸ್ ನಿಲ್ದಾಣವನ್ನು ಈಗಿನ ಕೃಷಿ ಇಲಾಖಾ ಜಾಗಕ್ಕೆ ಬದಲಾಗಿ ಆರ್‌ಎಂಸಿ ಜಾಗದಲ್ಲಿ ಮಾಡುವುದು ಒಳಿತು. ಇದರಿಂದ ನಗರದ ಒಳಭಾಗ ವಾಹನಗಳ ಒತ್ತಡ ಕಡಿಮೆಯಾಗುತ್ತದೆಂದು ಅಭಿಪ್ರಾಯಪಟ್ಟರು.
ನೂತನ ಖಾಸಗಿ ಬಸ್ ನಿಲ್ದಾಣದ ಬಗ್ಗೆ ಮಾಹಿತಿ ನೀಡಿದ ಇಂಜಿಯರ್ ರವಿ, 2.10 ಕೋಟಿ ರೂ. ವೆಚ್ಚದಲ್ಲಿ ಬಸ್ ಶೆಲ್ಟರ್, 2.10 ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತಿತರ ಕಾಮಗಾರಿ, 31 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, 19 ಲಕ್ಷ ರೂ. ವೆಚ್ಚದಲ್ಲಿ ಚರಂಡಿ, 25 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯಲಿದೆಯೆಂದು ತಿಳಿಸಿದರು. ಮಾರುಕಟ್ಟೆ ಕಾಮಗಾರಿಯ ಬಗ್ಗೆ ಇಂಜಿನಿಯರ್ ರವಿ ಮಾಹಿತಿ ನೀಡಿ, 2 ಕೋಟಿ ರೂ. ವೆಚ್ಚದಲ್ಲಿ ಕಾರು ಪಾರ್ಕಿಂಗ್ ಮತ್ತು ಸೆಲ್ಲರ್ ನಿರ್ಮಾಣ ಮತ್ತು 1 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣವಾಗಬೇಕಾಗಿತ್ತು. ಟೆಂಡರ್ ಸಲ್ಲಿಕೆಯ ಸಂದರ್ಭ ಟೆಂಡರ್ ದಾರ 3.53 ಕೋಟಿ ರೂ.ಗಳನ್ನು ನಮೂದಿಸಿದ್ದ. ಇದೀಗ ಈ ಮೊತ್ತ 4.50ಕೊಟಿ ರೂ.ಗೆ ಹೆಚ್ಚಿದೆಯೆಂದು ತಿಳಿಸಿದರು.
ಹೆಚ್ಚುವರಿ ಮೊತ್ತವನ್ನು ನಗರಸಭಾ ನಿಧಿಯಿಂದ ಬಳಸಿಕೊಳ್ಳುವುದಕ್ಕೆ ಸದಸ್ಯರು ತಮ್ಮ ವಿರೋಧ ವ್ಯಕ್ತಪಡಿಸಿ, ಈ ಹಿಂದೆ ನಿಗದಿಪಡಿಸಿದ ಮೊತ್ತದಲ್ಲೆ ಟೆಂಡರ್‌ದಾರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಭಿಪ್ರಾಯಪಟ್ಟರು. ಕಾಮಗಾರಿಯ ಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಗುತ್ತಿಗೆದಾರನಿಗೆ ನೀಡದೆ, ಆಗಿರುವ ಕಾಮಗಾರಿಯ ಶೇ.50 ರಷ್ಟನ್ನು ನೀಡಿ, ಕಾಮಗಾರಿ ಪೂರ್ಣವಾದ ಬಳಿಕ ಹಣ ಪಾವತಿಸುವಂತೆ ಸೂಚಿಸಿದರು.
ಮಾರುಕಟ್ಟೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರನಿಗೆ ಎಷ್ಟು ಹಣ ಪಾವತಿಸಬೇಕೆನ್ನುವ ವಿಚಾರದ ಚರ್ಚೆಯ ಸಂದರ್ಭ ಬಿಜೆಪಿಯ ಉಣ್ಣಿ ಕೃಷ್ಣ ಮತ್ತು ಕಾಂಗ್ರೆಸ್‌ನ ಎಚ್.ಎಂ.ನಂದ ಕುಮಾರ್ ಪರಸ್ಪರ ಏಕವಚನದಲ್ಲಿ ಪರಸ್ಪರ ವಾಗ್ವಾದ ನಡೆಸಿದರು.
ನಗರದ ಕೆಲವೆಡೆ ಅತ್ಯಂತ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವುದರಿಂದ ಲಭ್ಯ ಅನುದಾನ ಪೋಲಾಗುತ್ತಿರುವ ಬಗ್ಗೆ ಎಸ್‌ಡಿಪಿಐನ ಅಮಿನ್ ಮೊಹ್ಸಿನ್ ಸಭೆಯ ಗಮನ ಸೆಳೆೆದರು. ನಗರದ ಮಹದೇವಪೇಟೆ ಮತ್ತು ಗಣಪತಿ ಬೀದಿಗಳ ಎರಡು ಕಡೆಗಳಲ್ಲಿ ಒಳಚರಂಡಿ ಮಾಡಿದಲ್ಲಿ ಅವುಗಳನ್ನು ಸಂಪರ್ಕಿಸುವುದಾದರು ಹೇಗೆ ಎಂದು ಪ್ರಶ್ನಿಸಿದರು, ಇದಕ್ಕೆ ಸದಸ್ಯ ಪ್ರಕಾಶ್ ಇನ್ನಿತರ ಸದಸ್ಯರು ಬೆಂಬಲ ಸೂಚಿಸಿದರು.
ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
ಮಾರುಕಟ್ಟೆಗೆ ಹೆಚ್ಚುವರಿ ಅನುದಾನ : ನಗರದ ಮಾರುಕಟ್ಟೆ ಆವರಣದಲ್ಲಿ ಆರಂಭಗೊಂಡು ಇದೀಗ ಸ್ಥಗಿತಗೊಂಡಿರುವ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಸರಕಾರ ದಿಂದ 3 ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ. ಆದರೆ, ಪ್ರಸ್ತುತ ನಿರ್ಮಾಣ ವೆಚ್ಚ 4.50 ಕೋಟಿ ರೂ. ಗೆ ಏರಿಕೆಯಾಗಿರುವುದ ರಿಂದ ಹೆಚ್ಚುವರಿ ಹಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಣಯವನ್ನು ಸಭೆ ಕೈಗೊಂಡಿತು.