×
Ad

ಶಿವಮೊಗ್ಗ ನಗರದ ಹಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ

Update: 2016-05-10 21:47 IST

ಶಿವಮೊಗ್ಗ, ಮೇ 10: ಶಿವಮೊಗ್ಗ ನಗರದ ಮಂಡ್ಲಿ ಬಡಾವಣೆಯಲ್ಲಿರುವ ಕೃಷ್ಣ ರಾಜೇಂದ್ರ ನೀರು ಶುದ್ಧೀಕರಣ ಕೇಂದ್ರದಲ್ಲಿ ತಡರಾತ್ರಿ ತಾಂತಿ್ರಕ ಕಾರಣದಿಂದ ಮೋಟಾರ್‌ವೊಂದು ಸುಟ್ಟು ಹೋದ ಪರಿಣಾಮ, ಮಂಗಳವಾರ ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ಕುಡಿಯುವ ನೀರಿಗಾಗಿ ನಾಗರಿಕರು ಪರಿತಪಿಸುವಂತಾಯಿತು. ಪಾಲಿಕೆ ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತಾಯಿತು. ಮತ್ತೊಂದೆಡೆ ತಡರಾತ್ರಿಯಿಂದಲೇ ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಗಣೇಶ್ ನೇತೃತ್ವದ ಅಧಿಕಾರಿಗಳ ತಂಡ ಸುಟ್ಟು ಹೋದ ಮೋಟಾರ್ ದುರಸ್ತಿಗೆ ಇನ್ನಿಲ್ಲದ ಹರಸಾಹಸ ನಡೆಸಿತು. ಬದಲಿ ಮೋಟಾರ್ ಮೂಲಕ ನೀರು ಪೂರೈಕೆಗೆ ಯತ್ನಿಸಿತು. ಈ ಪ್ರಯತ್ನಗಳು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಲಿಲ್ಲ. ಇದರಿಂದ ಮಂಗಳವಾರ ಬೆಳಗ್ಗೆ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆಯಾಗಲಿಲ್ಲ. ನೀರಿನ ಬೇಡಿಕೆ ಕಂಡುಬಂದ ಏರಿಯಾಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಯಿತು. ಇದರಿಂದ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಪಾಲಿಕೆಯ ಟ್ಯಾಂಕರ್‌ಗಳು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ ಮಾಡುವಲ್ಲಿ ತಲ್ಲೀನವಾಗಿದ್ದವು. *ಸಮಸ್ಯೆಯೆಲ್ಲಿ?: ಮಂಗಳವಾರ ಸುದ್ದಿಗಾರರೊಂದಿಗೆ ಮಹಾನಗರ ಪಾಲಿಕೆ ಎಇಇ ಗಣೇಶ್‌ಮಾತನಾಡಿ, ಒಂದು ವಾರದ ಹಿಂದೆ ಕೆ.ಆರ್.ವಾಟರ್ ವರ್ಕ್ಸ್‌ನಲ್ಲಿನ ಮೋಟಾರ್ ದುರಸ್ತಿಯಾಗಿತ್ತು. ಸ್ಟ್ಯಾಂಡ್ ಬೈ ಮೋಟಾರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ತಡರಾತ್ರಿ ತಾಂತ್ರಿಕ ಕಾರಣಗಳಿಂದ ಈ ಮೋಟಾರ್ ಸುಟ್ಟು ಹೋಗಿದೆ. ಮೋಟಾರ್ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಸುಮಾರು 9 ಟ್ಯಾಂಕ್‌ಗಳಿಗೆ ನೀರು ಪೂರೈಕೆ ಸಾಧ್ಯವಾಗಿಲ್ಲ. ಟ್ಯಾಂಕರ್ ಸೇರಿದಂತೆ ಬದಲಿ ವ್ಯವಸ್ಥೆಯ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಬೇಸಿಗೆಯ ಅವಧಿಯಲ್ಲಿ ಕೆ.ಆರ್. ವಾಟರ್ ವರ್ಕ್ಸ್ ನಲ್ಲಿ ತಾಂತ್ರಿಕ ಕಾರಣದಿಂದ ಮೋಟಾರ್ ಕೈಕೊ ಟ್ಟಿದ್ದು, ಪಾಲಿಕೆ ಅಧಿಕಾರಿಗಳ ನಿದ್ದೆಗೆಡುವಂತೆ ಮಾಡಿತ್ತು. ಜೊತೆಗೆ ಊಟ, ನಿದ್ದೆಯ ಪರಿವೆಯೇ ಇಲ್ಲದೆ ಹಗಲಿರುಳು ಮೋಟಾರ್ ದುರಸ್ತಿ ಹಾಗೂ ನೀರು ಪೂರೈಕೆಗೆ ಹರಸಾಹಸ ನಡೆಸುವಂತಾಗಿರುವುದಂತೂ ಸತ್ಯ

. 9 ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗಿಲ್ಲ: ಮೋಟಾರ್ ಸುಟ್ಟು ಹೋದ ಪರಿಣಾಮದಿಂದ ತುಂಗಾನಗರ ಹಾಗೂ ಡಿಸಿಕಾಂಪೌಂಡ್ ಸಮೀಪದ ತಲಾ ಎರಡು ಟ್ಯಾಂಕ್, ಮಿಳಘಟ್ಟ, ರಾಜೇಂದ್ರನಗರ, ಜಿಪಂ, ರವೀಂದ್ರನಗರ, ನೆಹರೂ ಕ್ರೀಡಾಂಗಣ ಸಮೀಪದ ತಲಾ ಒಂದೊಂದು ಟ್ಯಾಂಕ್ ಹಾಗೂ ಪ್ರವಾಸಿ ಮಂದಿರದ ಸಮೀಪವಿರುವ ಬೂಸ್ಟರ್ ಕೇಂದ್ರಕ್ಕೆ ನೀರು ಪೂರೈಕೆಯಾಗಿಲ್ಲ.

<ಗಣೇಶ್,

ಮಹಾನಗರ ಪಾಲಿಕೆ ಎಂಜಿನಿಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News