×
Ad

‘ಕೆರೆ ಸಂಜೀವಿನಿ’ ಯೋಜನೆ ಅನುಷ್ಠಾನಕ್ಕೆ ನಿಬಂಧನೆ ಅಡ್ಡಿ

Update: 2016-05-10 21:48 IST

ಬಿ. ರೇಣುಕೇಶ್

 ಶಿವಮೊಗ್ಗ, ಮೇ 10: ರಾಜ್ಯದಲ್ಲಿ ಜನ-ಜಾನುವಾರುಗಳಿಗೆ ಉಪಯುಕ್ತವಾದ ಕೆರೆಗಳ ಹೂಳೆತ್ತಲು ಜೆಸಿಬಿ ಯಂತ್ರ ಬಳಕೆಗೆ ‘ಕೆರೆ ಸಂಜೀವಿನಿ’ ಯೋಜನೆಯಡಿ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಜೂನ್ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದೆ. ಆದರೆ ಈ ಯೋಜನೆಯ ಅನುಷ್ಠಾನಕ್ಕೆ ಸರಕಾರ ಜಾರಿಗೊಳಿಸಿರುವ ಕೆಲ ಮಾರ್ಗದರ್ಶಿ ಸೂತ್ರಗಳು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವೆಡೆ ಕಾಲಮಿತಿಯೊಳಗೆ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗದಂತಾಗಿದ್ದರೆ ಮತ್ತೆ ಕೆಲವೆಡೆ ಉಪಯುಕ್ತ ಕೆರೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಗೊಳಿಸಲು ಆಗದಂತಾಗಿದೆ. ಇದರಿಂದ ಹಲವು ಕೆರೆಗಳಲ್ಲಿ ಯೋಜನೆಯಡಿ ಜೆಸಿಬಿ ಯಂತ್ರ ಬಳಸಿ ಹೂಳು ತೆಗೆಯಲು ಅಸಾಧ್ಯವಾಗಿ ಪರಿಣಮಿಸಿದೆ. ಈ ಹಿಂದೆ ತಮ್ಮ ಹೊಲ, ಗದ್ದೆ, ತೋಟಗಳಿಗೆ ಕೆರೆಯಿಂದ ತೆಗೆದ ಹೂಳು ಹಾಕಲು ರೈತರು ಹೆಚ್ಚಿ ನ ಆಸಕ್ತಿವಹಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಕೆರೆಯ ಹೂಳು ಕೊಂಡೊಯ್ಯಲು ಮುಂದೆ ಬರುತ್ತಿಲ್ಲ. ಮಳೆಯಾಶ್ರಿತ ಪ್ರದೇಶಗಳಲ್ಲಿ ಮಾತ್ರ ರೈತರು ಹೂಳು ಕೊಂಡೊಯ್ಯಲು ಆಸಕ್ತಿ ವಹಿಸುತ್ತಾರೆ. ನೀರಾವರಿ ಪ್ರದೇಶದ ರೈತರು ಆಸಕ್ತಿವಹಿಸುವುದಿಲ್ಲ. ಪ್ರಸ್ತುತ ಸರಕಾರವು ರೈತರು ಹೂಳು ಕೊಂಡೊಯ್ಯಲು ಮುಂದೆ ಬರುವಂತಹ ಕೆರೆಗಳನ್ನು ಮಾತ್ರ ಜೆಸಿಬಿಯ ಮೂಲಕ ಹೂಳು ತೆಗೆಯಲು ಆಯ್ಕೆ ಮಾಡುವಂತೆ ಹಾಗೂ ಇದನ್ನು ಸ್ಥಳೀಯ ಪಿಡಿಒ ಗಳಿಂದ ದೃಢೀಕರಿಸುವಂತೆ ಆದೇಶಿಸಿರುವುದು ಯೋಜನೆ ಅನುಷ್ಠಾನಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಜಿಲ್ಲಾ ಪಂಚಾಯತ್‌ನ ಹಿರಿಯ ಅಧಿಕಾರಿಯೋರ್ವರು ಹೇಳುತ್ತಾರೆ. ಒಂದೊಮ್ಮೆ ಪ್ರಾರಂಭ ಹಂತದಲ್ಲಿ ರೈತರು ಹೂಳು ಕೊಂಡೊಯ್ಯಲು ಮುಂದೆ ಬಂದು ತದನಂತರ ಕೊಂಡೊಯ್ಯದಿದ್ದರೆ ಏನು ಮಾಡಬೇಕು? ಯಾವ ರೀತಿಯಲ್ಲಿ ಹೂಳು ಸಾಗಾಟ ಮಾಡಬೇಕು? ಇದಕ್ಕೆ ತಗಲುವ ವೆಚ್ಚ ಭರಿಸುವರ್ಯಾರು? ಎಂಬಿತ್ಯಾದಿ ಹಲವು ಪ್ರಶ್ನೆಗಳಿಗೆ ಇಲಾಖೆಯ ಮಾರ್ಗದರ್ಶಿ ಸೂತ್ರದಲ್ಲಿ ಯಾವುದೇ ಸ್ಪಷ್ಟ ಮಾಹಿತಿಯಿಲ್ಲವಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸುತ್ತಾರೆ. *ಸಡಿಲಿಸಬೇಕು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಹೂಳು ತೆಗೆಯಲು ಹಾಗೂ ನೀರು ಪೂರೈಕೆಯ ಕಾಲುವೆಗಳ ಅಭಿವೃದ್ಧಿಗೆ ಅವಕಾಶವಿದೆ. ಆದರೆ, ಎನ್‌ಆರ್‌ಇಜಿಯಲ್ಲಿ ಜೆಸಿಬಿ ಅಥವಾ ಇತರ ಯಂತ್ರೋಪಕರಣ ಬಳಸಿ ಹೂಳೆತ್ತುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಸಂಪೂರ್ಣವಾಗಿ ಕಾರ್ಮಿಕರ ಮೂಲಕವೇ ಕೆಲಸ ಮಾಡಿಸಬೇಕು. ಇದರಿಂದ ಹಲವು ಕೆರೆಗಳಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿರುವ ಹೂಳನ್ನು ಕಾಲಮಿತಿಯೊಳಗೆ ತೆಗೆಯಲು ಸಾಧ್ಯವಿಲ್ಲದಂತಾಗಿದೆ. ಪ್ರಸ್ತುತ ಕೆರೆ ಸಂಜೀವಿನಿ ಯೋಜನೆಯಡಿ ಜೆಸಿಬಿ ಯಂತ್ರ ಬಳಕೆ ಮಾಡಿ ಹೂಳು ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಉಪಯುಕ್ತ ಕೆರೆಗಳ ಹೂಳು ತೆಗೆಯಲು ಸಾಕಷ್ಟು ಅನುಕೂಲವಾಗುತ್ತದೆ. ಆದರೆ ರೈತರು ಹೂಳು ಕೊಂಡೊಯ್ಯಲು ಮುಂದೆ ಬರುವ ಪ್ರದೇಶಗಳ ಕೆರೆಯನ್ನು ಮಾತ್ರ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿರುವುದು ಯೋಜನೆಯ ಅನುಷ್ಠಾನಕ್ಕೆ ಎಡರುತೊಡರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳು ಈ ಮಾರ್ಗದರ್ಶಿ ಸೂತ್ರ ಸರಳೀಕರಣಕ್ಕೆ ಮುಂದೆ ಬರಬೇಕು. ಕೆರೆಯ ಹೂಳನ್ನು ಇಲಾಖೆಯ ಮೂಲಕವೇ ಸಾಗಾಟ ಮಾಡುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೆ ಅಥವಾ ಇಲಾಖೆಯ ಇತರ ಯೋಜನೆಗಳಡಿ ಹಣ ವ್ಯಯಿಸಲು ಅವಕಾಶ ಕಲ್ಪಿಸಬೇಕು.

ಇದರಿಂದ ಸರಕಾರ ನಿಗದಿಪಡಿಸಿರುವ ಜೂನ್ 15 ರ ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗಲಿದೆ. ಇಲ್ಲ

ದಿದ್ದರೆ ಹಲವು ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನ ಕಷ್ಟ ಸಾಧ್ಯವಾಗಲಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೋರ್ವರು ಹೇಳುತ್ತಾರೆ. ಒಟ್ಟಾರೆ ರಾಜ್ಯ ಸರಕಾರ ಜಾರಿಗೊಳಿಸಿರುವ ಮಹತ್ವದ ಯೋಜನೆಯೊಂದು ನಿಬಂಧನೆಯೊಂದರ ಕಾರಣದಿಂದಲೇ ಅನುಷ್ಠಾನ ವಿಳಂಬವಾಗುವಾಗಲು ಕಾರಣವಾಗಿದೆ. ತಕ್ಷಣವೇ ಸರಕಾರ ನಿಯಮ ಸರಳೀಕರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಲಿ

ದೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ. ಅಡ್ಡಿಯೇನು?:

ಕುಡಿಯುವ ನೀರು ಸರಬರಾಜು ಯೋಜನೆಗಳ ಜಲಮೂಲ ಅಭಿವೃದ್ಧಿಗೆ ಸಹಕಾರಿಯಾಗುವ ಕೆರೆಗಳಲ್ಲಿ ಹೂಳೆತ್ತಲು ಹೆಚ್ಚಿನ ಆದ್ಯತೆ ನೀಡಬೇಕು. ಡಿಸಿ-ಸಿಇಒ ಅಧ್ಯಕ್ಷತೆಯ ಸಮಿತಿಯ ಸಭೆಯ ಅನುಮೋದನೆ ಪಡೆಯಬೇಕು. ಗಂಟೆಗೆ ಇಂತಿಷ್ಟೆ ಪ್ರಮಾಣದಲ್ಲಿ ಜೆಸಿಬಿಯಿಂದ ಹೂಳು ತೆಗೆಸಬೇಕು ಎಂಬಿತ್ಯಾದಿ ನಿಬಂಧನೆಗಳನ್ನು ಹಾಕಲಾಗಿದೆ. ಆದರೆ ಈ ನಿಬಂಧನೆಗಳಲ್ಲಿ ರೈತರು ಹೂಳು ತೆಗೆದುಕೊಂಡು ಹೋಗಲು ಮುಂದೆ ಬರುವಂತಹ ಕೆರೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಸ್ಥಳೀಯ ಗ್ರಾಪಂ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಗಳು ರೈತರು ಹೂಳು ಕೊಂಡೊಯ್ಯುತ್ತಾರೆ ಎಂಬುವುದನ್ನು ದೃಢೀಕರಿಸಬೇಕು ಎಂಬ ಷರತ್ತು ಯೋಜನೆಗೆ ಅಡ್ಡಿಯಾಗಿ ಪರಿಣಮಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News