×
Ad

ಎಪಿಎಂಸಿ ಚುನಾವಣೆ ನವೆಂಬರ್‌ಗೆ ಮುಂದೂಡಿಕೆ:ಸಚಿವ ಶಾಮನೂರು ಶಿವಶಂಕರಪ್ಪ

Update: 2016-05-10 21:50 IST

 ದಾವಣಗೆರೆ, ಮೇ 10: ರಾಜ್ಯದಲ್ಲಿ ಪ್ರಸ್ತುತ ಬರಗಾಲ ಇರುವುದರಿಂದ ಮತ್ತು ಕೃಷಿ ಉತ್ಪನ್ನಮಾರುಕಟ್ಟೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಬೇಕಾಗಿರುವುದರಿಂದ ಎಪಿಎಂಸಿ ಚುನಾವಣೆ ನವೆಂಬರ್‌ಗೆ ಮುಂದೂಡಲಾಗಿದೆ ಎಂದು ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 300ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಪ್ರಸ್ತುತ ಚುನಾವಣೆ ನಡೆಸಬೇಕಾಗಿತ್ತು. ಆದರೆ ರಾಜ್ಯದಲ್ಲಿ ಬರಗಾಲವಿರುವುದರಿಂದ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

 ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಮಹಿಳಾ ಸಂಖ್ಯೆಯನ್ನು ಪ್ರಸ್ತುತ 1 ರಿಂದ 3ಕ್ಕೆ ಏರಿಸಲು ಚಿಂತನೆ ಮಾಡಲಾಗಿದೆ. ಹೀಗಾಗಿ ಎಲ್ಲಾ ಎಪಿಎಂಸಿಗಳಿಗೆ ಮುಂದಿನ ಚುನಾವಣೆಯವರೆಗೂ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದರು. *ಮಾವು ಇಳುವರಿ ಕಡಿಮೆ

ಪ್ರಸ್ತುತ ರಾಜ್ಯದಲ್ಲಿ ಬರಗಾಲ ಇರುವುದರಿಂದ ಮಾವು ಇಳುವರಿಯೂ ಕಡಿಮೆಯಾಗಿದೆ. ಅಲ್ಲದೇ ಈ ಬಾರಿ ಸ್ವಲ್ಪ ಹುಳಿ ಮಾವು ಬಂದಿದೆ. ಕೋಲಾರ, ಧಾರವಾಡ ಸೇರಿದಂತೆ ಹಲವೆಡೆ ಮಾವಿನ ಬೆಳೆ ಉತ್ತಮವಾಗಿದೆ. ಮಾವು ರಫ್ತು ಮಾಡಲು ಈಗಾಗಲೇ ಮಲೇಷಿಯಾ ಅಧಿಕಾರಿಗಳೊಂದಿಗೆ ಚರ್ಚೆ ಆರಂಭವಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗಿದೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ 23 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡಲಾಗಿದೆ ಎಂದು ತಿಳಿಸಿದರು.

*ವರಿಷ್ಠರಿಗೆ ಬಿಟ್ಟಿದ್ದು

ಕೆಪಿಸಿಸಿ ಅಧ್ಯಕ್ಷರ ನೇಮಕ ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತದ ವ್ಯಕ್ತಿಯನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ.

 ರಾಜ್ಯ ಸರಕಾರ ಮೂರು ವರ್ಷ ಪೂರೈಸಿರುವುದರಿಂದ ಸಂಪುಟ ಪುನಾರಚನೆ ಮಾಡುವುದು ಸಹಜ. ಆದರೆ ಅಂತಹ ಮೇಜರ್ ಬದಲಾವಣೆ ಏನೂ ಆಗುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News