ಅಧ್ಯಕ್ಷರಾಗಿ ತೆಕ್ಕಡೆ ಶೋಭಾ, ಉಪಾಧ್ಯಕ್ಷ ಸುಬ್ರಮಣಿ
ಮಡಿಕೇರಿ, ಮೇ 10: ಮಡಿಕೇರಿ ತಾಲೂಕು ಪಂಚಾಯತ್ ನೂತನ ಅಧ್ಯಕ್ಷರಾಗಿ ತೆಕ್ಕಡೆ ಶೋಭಾ ಹಾಗೂ ಉಪಾಧ್ಯಕ್ಷರಾಗಿ ಬೊಳಿಯಾಡಿರ ಸುಬ್ರಮಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಯು ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ತೆಕ್ಕಡೆ ಶೋಭಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೊಳಿಯಾಡಿರ ಸುಬ್ರಮಣಿ ಅವರು ಏಕೈಕ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಈ ಕಾರಣದಿಂದ ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ತೆಕ್ಕಡೆ ಶೋಭಾ, ತಾಪಂ ನ್ನು ಮಾದರಿ ಪಂಚಾಯತ್‌ಯನ್ನಾಗಿ ರೂಪಿಸಲು ನಿಸ್ವಾರ್ಥ ಸೇವೆ ಸಲ್ಲಿಸುವುದಾಗಿ ಹೇಳಿದರು. ಸರ್ವ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರ ಪಡೆದು ಮುನ್ನಡೆಯುವುದಾಗಿ ತಿಳಿಸಿದರು.ಉಪಾಧ್ಯಕ್ಷರಾದ ಸುಬ್ರಮಣಿ ಮಾತನಾಡಿ, ತಾಲೂಕಿನ ಜನರಿಗೆ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸದಸ್ಯರಾದ ನಾಗೇಶ್ ಕುಂದಲ್ಪಾಡಿ, ರಾಯ್ ತಮ್ಮಯ್ಯ, ಎಚ್.ಎಸ್.ಶಶಿ, ಗಣಪತಿ, ಕುಮುದ, ಎಂ.ಕೆ.ಸಂಧ್ಯಾ, ಇಂದಿರಾ ಹರೀಶ್, ಉಮಾಪ್ರಭು ಮತ್ತಿ ತರರು ಉಪಸ್ಥಿತರಿದ್ದರು.
ಮಡಿಕೇರಿ ತಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷೆ ತೆಕ್ಕಡೆ ಶೋಭಾ ಅವರು ಹೊದ್ದೂರು ಕ್ಷೇತ್ರದವರಾಗಿದ್ದು, ಬೊಳಿಯಾಡಿರ ಸುಬ್ರಮಣಿ ಕುಂಜಿಲ ಕಕ್ಕಬ್ಬೆ ಕ್ಷೇತ್ರದವರಾಗಿದ್ದಾರೆ.