×
Ad

ಸೇವಾ ಮನೋಭಾವದಿಂದ ಕೆಲಸಮಾಡಿ: ಗಾಯತ್ರಿಶಾಂತೇಗೌಡ

Update: 2016-05-10 22:08 IST

 ಚಿಕ್ಕಮಗಳೂರು, ಮೇ 10: ಆಟೊ ಚಾಲಕರು ಸೇವಾ ಮನೋಭಾವದಿಂದ ಪ್ರಾಮಾಣಿಕತೆ ಮೆರೆದು ಕೆಲಸ ಮಾಡಿದರೆ ಪ್ರಯಾಣಿಕರ ಆಶೀರ್ವಾದದಿಂದ ನಿಮ್ಮ ಜೀವನ ಸುಗಮವಾಗಿ ಸಾಗುತ್ತದೆ ಎಂದು ಮಾಜಿ ಎಂಎಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ ಕರೆ ನೀಡಿದರು.

ಅವರು ಮಂಗಳವಾರ ದಂಟರಮಕ್ಕಿಯಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಕನಕದಾಸ ಆಟೊ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಆಟೊ ಚಾಲಕರು ತಮ್ಮ ಕುಟುಂಬ ನಿರ್ವಹಣೆಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಡುತ್ತೀರಿ. ದುಡಿದ ಹಣವನ್ನು ವ್ಯಯಮಾಡದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಗಿಸಿದರೆ ಭವಿಷ್ಯದಲ್ಲಿ ನಿಮಗೆ ಸಹಕಾರಿಯಾಗುತ್ತದೆ. ಮಳೆ, ಬಿಸಿಲಿನಲ್ಲಿ ದುಡಿಯುವ ಚಾಲಕರಿಗೆ ನೆರಳಿಗಾಗಿ ನಗರದ ವಿವಿಧ ಆಟೊ ನಿಲ್ದಾಣ ನಿರ್ಮಾಣಕ್ಕೆ 29 ಲಕ್ಷ ರೂ. ಈ ಹಿಂದೆ ನೀಡಿದ್ದೇನೆ ಎಂದು ಹೇಳಿದರು.

ಕೆ ಲವು ಪ್ರಯಾಣಿಕರು ಕಷ್ಟದಲ್ಲಿದ್ದಾಗ ಚಾಲಕರು ಮಾನವೀಯತೆಯಿಂದ ಸ್ಪಂದಿಸಿದ ಅದೆಷ್ಟೋ ಉದಾಹರಣೆಗಳಿದೆ. ಅದೇ ರೀತಿ ನಮಗೆ ಸಿಕ್ಕ ಅವಕಾಶದಲ್ಲಿ ಕೈಲಾದ ಮಟ್ಟಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿದಾಗ ಅದೇ ನಮ್ಮನ್ನು ಕಾಪಾಡುತ್ತದೆ ಎಂದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಮೂರು ವರ್ಷ ಕಳೆದಿದೆ. ಬಡವರು, ದೀನ ದಲಿತರು ಹಾಗೂ ಹಿಂದುಳಿದ ಸಮಾಜವನ್ನು ಆದ್ಯತೆಯಲ್ಲಿಟ್ಟುಕೊಂಡು ಜನರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.

ನಗರಸಭಾ ಸದಸ್ಯ ಜಗದೀಶ್ ಮಾತನಾಡಿ, ಜನರ ಕಷ್ಟ ಸುಖಕ್ಕೆ ಆದವನೆ ನೆಂಟ ಎಂಬಂತೆ ಗಾಯತ್ರಿ ಶಾಂತೇಗೌಡರು ಓರ್ವ ಮಹಿಳೆಯಾಗಿ ಎಲ್ಲ ರಾಜಕೀಯ ಅಡೆತಡೆಗಳನ್ನು ಎದುರಿಸಿ ಸಾಮಾನ್ಯ ಜನರಿಗೆ ಸ್ಪಂದಿಸುತ್ತಾ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಶಂಕರಪುರ, ತಮಿಳು ಕಾಲನಿ, ವಿಜಯಪುರ, ಕೆಂಪನಹಳ್ಳಿ ಸೇರಿದಂತೆ ನಗರದ 11 ಕಡೆಗಳಲ್ಲಿ ನೂತನ ಆಟೊ ನಿಲ್ದಾಣದ ಅಭಿವೃದ್ಧ್ದಿಗೆ ಸಹಕರಿಸಿ ನೂರಾರು ಆಟೊ ಚಾಲಕರಿಗೆ ನೆರಳು ನೀಡಿದ್ದಾರೆ ಎಂದರು.

ಬಸವನಹಳ್ಳಿ ಕೆರೆಯ ನಡುಗುಡ್ಡೆಯಲ್ಲಿ ಕನಕದಾಸರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಗ್ರಾಮಸ್ಥರು ಕುಳಿತು ಚರ್ಚಿಸಿ ಒಗ್ಗಟ್ಟಿನಿಂದ ತೀರ್ಮಾನಿಸಿದರೆ ಸಂಬಂಧಪಟ್ಟವರ ಜೊತೆ ಮಾತನಾಡಿ ಸಹಕರಿಸುವುದಾಗಿ ಗಾಯತ್ರಿ ಶಾಂತೇಗೌಡ ಭರವಸೆ ನೀಡಿದರು.

ಸಿಡಿಎ ಅಧ್ಯಕ್ಷ ಚಂದ್ರೇಗೌಡ, ನಗರಸಭಾ ಸದಸ್ಯ ಡಿ.ಕೆ.ನಟರಾಜ್, ಪಿಸಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸಾಸೇಗೌಡ, ಆಟೊ ನಿಲ್ದಾಣದ ಅಧ್ಯಕ್ಷ ಮಂಜುನಾಥ್, ವಾಲ್ಮೀಕಿ ಸಂಘದ ಅಧ್ಯಕ್ಷ ಭೀಮಣ್ಣ, ಎಪಿಎಂಸಿ ಸದಸ್ಯ ಭದ್ರೇಗೌಡ, ಮುಖಂಡರಾದ ರೇವಣ್ಣ ಪುಟ್ಟಗೌಡ, ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News