×
Ad

ಬಿಜೆಪಿಯಿಂದ ಬರ ಅಧ್ಯಯನ ವರದಿ ಸಲ್ಲಿಕೆ

Update: 2016-05-10 23:48 IST

ಬೆಂಗಳೂರು, ಮೇ 10: ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ಎಡವಿದ್ದು, ಪರಿಹಾರ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ, ಈ ಕೂಡಲೇ ಮಧ್ಯ ಪ್ರವೇಶಿಸಿ ಬರ ನಿರ್ವಹಣೆ ಬಗ್ಗೆ ಸರಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ರಾಜ್ಯ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ.
 ಮಂಗಳವಾರ ರಾಜ್ಯ ಬಿಜೆಪಿ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಬರ ಪ್ರವಾಸ ಅಧ್ಯಯನದ ವರದಿ ಸಲ್ಲಿಸಿತು. ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಬರಗಾಲವೂ ಸೇರಿದಂತೆ ಹಲವು ವಿಚಾರಗಳಲ್ಲಿನ ನಿರ್ಲಕ್ಷ್ಯ ಖಂಡಿಸಿ ರಾಜ್ಯ ಸರಕಾರಕ್ಕೆ ಬುದ್ಧಿ ಕಲಿಸಲು ಜನರೇ ಹೋರಾಟಕ್ಕೆ ಇಳಿಯಬೇಕು. ಹೀಗಿದ್ದರೂ ಸರಕಾರದ ಧೋರಣೆ ವಿರುದ್ಧ ರಾಜ್ಯದಲ್ಲಿ ಬೃಹತ್ ಆಂದೋಲನ ನಡೆಸಲಾಗುವುದು ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಅಸಹನೀಯವಾಗಿದೆ. ಸ್ಪಂದಿಸ ಬೇಕಾದ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಬರ ಪರಿಹಾರಕ್ಕೆ ಕೇಂದ್ರ ನೀಡಿರುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿ ಖರ್ಚು ಮಾಡಲಿ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಸರಕಾರದ ವೈಲ್ಯದ ಬಗ್ಗೆ ರಾಜ್ಯಪಾಲರಿಗೆ ದೊಡ್ಡ ಪಟ್ಟಿ ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸಿಎಂ ಸಿದ್ದರಾಮಯ್ಯ ಇದನ್ನು ನಿಭಾಯಿಸುವಲ್ಲಿ ವಿಲರಾಗಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯಗಳಲ್ಲಿ ವನ್ಯಜೀವಿಗಳಿಗೆ ಕುಡಿಯಲು ನೀರಿಲ್ಲ. ಮೇವನ್ನು ಖರೀದಿಸಲಾಗುವುದು ಎಂದು ಸರಕಾರ ಹೇಳುತ್ತಿದ್ದು, ಉಚಿತವಾಗಿ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು.
ಸರಕಾರದ ಸಾಧನೆ ಶೂನ್ಯ: ಕಾಂಗ್ರೆಸ್ ಸರಕಾರದ ಸಾಧನೆ ಶೂನ್ಯ. ಬರ ಇದ್ದರೂ ಕುರ್ಚಿ ಅಲುಗಾಡುತ್ತಿದೆ ಎಂದು ಗೊತ್ತಾದ ಮೇಲೆ ಸಚಿವ ಸಂಪುಟ ಪುನರ್ ರಚಿಸುವುದಾಗಿ ಹೇಳುತ್ತಿದ್ದಾರೆ. ಇದು ನಾಚಿಕೆಗೇಡು. ವರ್ಗಾವಣೆ ದಂಧೆಯಲ್ಲಿರುವ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಆರಂಭಿಸಿದ ಮೇಲೆ ಮುಖ್ಯಮಂತ್ರಿ ಪ್ರವಾಸ ಆರಂಭಿಸಿದ್ದು ಬೇಜವಾಬ್ದಾರಿತನದ್ದು ಎಂದು ಆಪಾದಿಸಿದರು. ಸಚಿವರಾಗಿರುವ ಎಚ್.ಕೆ.ಪಾಟೀಲರು ಕುಡಿಯುವ ನೀರಿನ ವಿತರಣೆಯಲ್ಲೂ ಕೂಡ ಭ್ರಷ್ಟಾಚಾರ ನಡೆದಿದೆ ಎಂದಿದ್ದಾರೆ. ಹಿರಿಯ ಸಚಿವರೇ ಹೀಗೆ ಹೇಳಿದರೆ ಏನು ಗತಿ ಎಂದ ಅವರು, ಕುಡಿಯುವ ನೀರಿಗೆ ಹಾಹಾಕಾರವಿದೆ. ಇದಕ್ಕಾಗಿ ರಾಜ್ಯ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
ನಿಯೋಗದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, ಮಾಜಿ ಸಚಿವರಾದ ಸುರೇಶ್ ಕುಮಾರ್, ಸಿ.ಟಿ.ರವಿ, ಮುಖಂಡರಾದ ಅರಗ ಜ್ಞಾನೇಂದ್ರ ಹಾಗೂ ಮಂಜುಳಾ ಉಪಸ್ಥಿತರಿದ್ದರು.

ಅಧ್ಯಯನ ವರದಿ ಮನವಿ ಗುಳೆ ಸಮಸ್ಯೆ ಪರಿಹಾರಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆರೆಗಳ ಹೂಳೆತ್ತುವ ಕೆಲಸ ನೀಡಿದರೆ ಮುಂಗಾರಿನಲ್ಲಿ ಮಳೆ ಶೇಖರಣೆಯಾಗುತ್ತದೆ.

  • ಕುಡಿಯುವ ನೀರಿಗಾಗಿ ಟ್ಯಾಂಕರ್ ಹಾಗೂ ರೈಲುಗಳ ಮೂಲಕ ನೀರು ಸರಬರಾಜು ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು.
  • ರೈತರು ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾವನ್ನೂ ಕೂಡಲೇ ಮಾಡಿ ಅವರ ಸಂಕಷ್ಟ ಪರಿಹರಿಸಬೇಕು.
  • ಮುಂಗಾರಿಗೂ ಮುನ್ನ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಉಚಿತವಾಗಿ ನೀಡಬೇಕು.
  • 150 ತಾಲ್ಲೂಕುಗಳು ತೀವ್ರ ಬರಪೀಡಿತವೆಂದು ಘೋಷಿಸಿ ಪರಿಹಾರ ವಿತರಿಸಬೇಕು.
  • ರಾಜ್ಯದಲ್ಲಿ ತುರ್ತಾಗಿ 32 ಗೋಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು.
  • ನಿರಂತರ ವಿದ್ಯುಚ್ಛಕ್ತಿ ಸರಬರಾಜು ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News