ಐವರಿಗೆ ಜೀವಾವಧಿ ಶಿಕ್ಷೆ , ಓರ್ವ ಆರೋಪಿ ಖುಲಾಸೆ

Update: 2016-05-10 18:20 GMT

ಬೆಂಗಳೂರು, ಮೇ 10: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ 2005ರಲ್ಲಿ ನಡೆದ ಗುಂಡಿನ ದಾಳಿ ಹಾಗೂ ಪ್ರೊ.ಎಂ.ಸಿ.ಪುರಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಲಷ್ಕರೆ ತಯ್ಯಿಬಾ ಸಂಘಟನೆಯೊಂದಿಗೆ ಗುರುತಿಸಿ ಕೊಂಡಿದ್ದರೆನ್ನಲಾದ ಆರು ಜನ ಆರೋಪಿಗಳ ಪೈಕಿ ಐದು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮತ್ತೊಬ್ಬ ಆರೋಪಿ ಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಕೆಳ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕೆಂದು ಆರೋಪಿ ಮುಹಮ್ಮದ್ ರಝಾವುಲ್ ರಹ್ಮಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ ಮತ್ತು ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.

ಸರಕಾರದ ಪರ ವಾದ ಮಂಡಿಸಿದ ವಕೀಲರು ಆರು ಜನ ಆರೋಪಿಗಳಿಗೆ 2ನೆ ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಆದರೆ, ಈ ಆರೋಪಿಗಳಿಗೆ ಐಪಿಸಿ 120-ಬಿ, 121, 121-ಎ, 122, 124-ಎ ಕಲಂಗಳ ಅಡಿಯಲ್ಲಿ ಗಲ್ಲು ಶಿಕ್ಷೆಗೆ ಆದೇಶಿಸಬೇಕೆಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಾದಿಸಿದ ವಕೀಲರು ಆರು ಜನ ಆರೋಪಿಗಳಾದ ಮುಹಮ್ಮದ್ ರಝಾವುಲ್ ರಹ್ಮಾನ್, ಅಫ್ಝಲ್ ಪಾಶಾ, ಮೆಹಬೂಬ್ ಇಬ್ರಾಹೀಮ್, ಮೀರುದ್ದೀನ್ ಖಾನ್, ನಿಝಾಮುದ್ದೀನ್ ಹಾಗೂ ಮುನ್ನಾಗೆ ಈಗಾಗಲೇ 2ನೆ ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಹೀಗಾಗಿ, ಈ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬಾರದು ಹಾಗೂ ಮೂರನೆ ಆರೋಪಿಗೆ ಈಗಾಗಲೇ 7 ವರ್ಷ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದ್ದು, ಆತನನ್ನು ಪ್ರಕರಣದಿಂದ ಬಿಡುಗಡೆಗೊಳಿಸಬೇಕೆಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಮೂರನೆ ಆರೋಪಿ ಈಗಾಗಲೇ 7 ವರ್ಷ ಕಾರಾಗೃಹ ಶಿಕ್ಷೆಯನ್ನು ಅನು ಭವಿಸಿದ್ದರಿಂದ ಆತನನ್ನು ಬಿಡುಗಡೆಗೊಳಿಸಲು ಆದೇಶಿಸಿ, ಉಳಿದ ಐವರು ಆರೋಪಿಗಳಿಗೆ ಕೆಳ ಹಂತದ ನ್ಯಾಯಾಲಯ ಆದೇಶಿಸಿದ್ದ ತೀರ್ಪನ್ನು ಎತ್ತಿ ಹಿಡಿಯಿತು. ಪ್ರಕರಣದ ಹಿನ್ನೆಲೆ:      
ಐಐಎಸ್ಸಿಯಲ್ಲಿ ನಡೆದಿದ್ದ ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಗಳಿಂದ ಪ್ರತಿನಿಧಿಗಳು ಸೇರಿದ್ದ ಸಂದರ್ಭದಲ್ಲಿ ಡಿ.28, 2005ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಶಂಕಿತರಿಂದ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಹೊಸದಿಲ್ಲಿ ಐಐಟಿಯ ನಿವೃತ್ತ ಪ್ರಾಧ್ಯಾಪಕ ಎಂ.ಎಸ್.ಪುರಿ ಸಾವನ್ನಪ್ಪಿ ಇತರ ನಾಲ್ವರು ಗಾಯಗೊಂಡಿದ್ದರು. ಈ ಸಂಬಂಧ 2006ರ ನ.14ರಂದು ಪೊಲೀಸರು 13 ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ಕೆಳ ನ್ಯಾಯಾಲಯ ಆರು ಮಂದಿಗೆ ಜೀವಾವಧಿ ಶಿಕ್ಷೆಯನ್ನು ಉಳಿದವರಿಗೆ ಶಿಕ್ಷೆ ಹಾಗೂ ದಂಡವನ್ನು ವಿಧಿಸಿತ್ತು. ಹೀಗಾಗಿ, ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಐವರಿಗೆ ಜೀವಾವಧಿ ಶಿಕ್ಷೆ ಯನ್ನು ವಿಧಿಸಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News