×
Ad

ಅಪಾರ ಪ್ರಮಾಣದ ಬೆಳೆ ಹಾನಿ

Update: 2016-05-11 21:37 IST

 ಕುಶಾಲನಗರ, ಮೇ 11: ಇಲ್ಲಿನ ಸಮೀಪದ ಬೆಂಡೆಬೆಟ್ಟ ಅರಣ್ಯದಿಂದ ಹಾರಂಗಿ ನದಿಯನ್ನು ದಾಟಿ ಕಳೆದ ರಾತ್ರಿ ಹುದುಗೂರು ಗ್ರಾಮಕ್ಕೆ ಧಾವಿಸಿರುವ ಮರಿಯಾನೆ ಸೇರಿದಂತೆ 4 ಕಾಡಾನೆಗಳ ಹಿಂಡು ಹುದುಗೂರು ಗ್ರಾಮದ ಚಂದ್ರಾವತಿ ಎಂಬವರ ಜಮೀನಿನಲ್ಲಿ ಬೆಳೆದ ಬಾಳೆ ತೋಟದಲ್ಲಿ ಬೀಡು ಬಿಟ್ಟಿದ್ದು, ಬೆಳಗ್ಗಿನ ಜಾವ ಮನೆ ಮುಂಭಾಗದಲ್ಲಿ ಕಾಡಾನೆ ಹಿಂಡು ದಾಟುವ ಸಂದರ್ಭದಲ್ಲಿ ನೋಡಿದ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಅವುಗಳನ್ನು ಹಾರಂಗಿ ನದಿ ದಾಟಿಸಿ, ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.

ಗ್ರಾಮಸ್ಥರು ತಮ್ಮ ತಮ್ಮ ಜಮೀನಿಗೆ ತೆರಳಿದಾಗ ಈ ವ್ಯಾಪ್ತಿಯ ಮುತ್ತಣ್ಣ, ಪೊನ್ನಪ್ಪ, ಮಂಜುನಾಥ್ ಎಂಬವರ ಜಮೀನುಗಳಲ್ಲಿ ಬೆಳೆದಿದ್ದ ಶುಂಠಿ, ಕೇನೆ, ಕೆಸುಗೆಡ್ಡೆ ಬೆಳೆಗಳನ್ನು ಕಾಡಾನೆಗಳು ತುಳಿದು ಭಾರಿ ನಷ್ಟಪಡಿಸಿದ್ದು ಕಂಡು ಬಂತು.

ಚಂದ್ರಾವತಿ ಅವರ ಬಾಳೆತೋಟದಲ್ಲಿ ಕಾಡಾನೆಗಳು ಬೀಡುಬಿಟ್ಟು, ಬೆಳೆಯನ್ನು ನಷ್ಟ ಪಡಿಸಿರುವ ಸ್ಥಳಕ್ಕೆ ಕೂಡಿಗೆ ಗ್ರಾಪಂ ಅಧ್ಯಕ್ಷೆ ಪ್ರೇಮಲೀಲಾ, ಗ್ರಾಪಂ ಸದಸ್ಯ ರವಿ, ಹುದುಗೂರು ವಲಯ ಅರಣ್ಯಾಧಿಕಾರಿ ಎಸ್.ಪಿ.ಸತೀಶ್‌ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಗ್ರಾಪಂ ಅಧ್ಯಕ್ಷೆ ಪ್ರೇಮಲೀಲಾ ಸುದ್ದಿಗಾರರೊಂದಿಗೆ ಮಾತನಾಡಿ, ನಷ್ಟಕ್ಕೊಳಗಾಗಿರುವವರು ಈ ವ್ಯಾಪ್ತಿಯಲ್ಲಿ ತೀರಾ ಬಡ ರೈತರಾಗಿರುತ್ತಾರೆ. ಅಲ್ಲದೆ, ಸಹಕಾರಿ ಸಂಘಗಳಿಂದ ಸಾಲ ಪಡೆದು ಕೃಷಿ ಮಾಡಿ, ಅದು ಆನೆ ತುಳಿತಕ್ಕೆ ಒಳಗಾದರೆ ಸಾಲ ತೀರಿಸುವುದು ಕಷ್ಟಕರವಾದ ವಿಷಯವಾಗಿದೆ. ಕಾಡಾನೆ ಹಿಂಡು ರಾತ್ರಿಯಲ್ಲದೆ ಬೆಳಗಿನ ಜಾವದಲ್ಲೂ ಈ ವ್ಯಾಪ್ತಿಯಲ್ಲಿ ಕಂಡುಬರುತ್ತಿರುವುದುರಿಂದ ಸಾರ್ವಜನಿಕರು ಭಯಬೀತರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲಿಸಿ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕಾಗಿ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News