×
Ad

ಸರಕಾರದ ಆದೇಶ ಉಲ್ಲಂಘಿಸಿ ಅಧಿಕಾರಿಗಳ ಬೇಜವಾಬ್ದಾರಿ: ರೈತ ಸಂಘ ಆರೋಪ

Update: 2016-05-11 21:54 IST

ಸೊರಬ, ಮೇ 11: ಸರಕಾರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ಪಟ್ಟಣದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಪ್ರತಿನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಬುಧವಾರ ಪಟ್ಟಣ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಸರಿಯಾದ ಸಮಯದಲ್ಲಿ ಅಧಿಕಾರಿಗಳು ಸಿಗದೆ ಇರುವುದರಿಂದ ರೈತರಿಗೆ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ತಾಲೂಕಿನಲ್ಲಿ ಬರಗಾಲ ಇರುವುದರಿಂದ ರೈತರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ರೈತರನ್ನು ಸತಾಯಿಸುತ್ತಿದ್ದಾರೆ. ಬೆಳೆವಿಮೆ ಕಟ್ಟಿದ ರೈತರಿಗೆ ಬೆಳೆ ವಿಮೆ ಸಿಗದೆ ಕಂಗಾಲಾಗಿದ್ದಾರೆ. ಕೆಲವು ಹೋಬಳಿಗಳಿಗೂ ಬರ ಪರಿಹಾರ ನೀಡಿಲ್ಲ. ರೈತರಿಗೆ ತೊಂದರೆ ಆಗದ ರೀತಿಯಲ್ಲಿ ತಾಲೂಕು ಆಡಳಿತಕ್ಕೆ ಸೂಚಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥ ಗೌಡ, ತಾಲೂಕು ಅಧ್ಯಕ್ಷ ಉಮೇಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಆನಂದ ಡಿ. ನಾಯ್ಕಾ, ಪ್ರಮುಖರಾದ ಈಶ್ವರಪ್ಪಕೊಡಕಣಿ, ಇಂದೂಧರ ಪಾಟೀಲ್ ಉದ್ರಿ ಸೇರಿದಂತೆ ಮತ್ತಿತರರು ಇದ್ದರು.

ಮನವಿ ಸಲ್ಲಿಸಲು ಹರಸಾಹಸ ಪಟ್ಟ ರೈತ ಮುಖಂಡರು: ರಾಜ್ಯ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ತಾಲೂಕಿಗೆ ಭೇಟಿ ನೀಡಿದ್ದರೂ ಸಹ, ಸೌಜನ್ಯಕ್ಕಾಗಲಿ ಅಥವಾ ರೈತ ಪರ ಸಮಸ್ಯೆಗಳನ್ನು ಆಲಿಸಲಿಕ್ಕಾಗಿ ಕೆಲ ಸಮಯ ಚರ್ಚಿಸದೇ, ರೈತರು ಅವರ ಕಾರಿನ ಬಳಿಯೇ ತೆರಳಿ ಮನವಿ ಸಲ್ಲಿಸಬೇಕಾದ ದುಸ್ಥಿತಿ ಎದುರಾಯಿತು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಪಾಟೀಲ್ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರದಿಂದ ತತ್ತರಿಸಿರುವ ರೈತರ ಸಮಸ್ಯೆ ಕುರಿತು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ಅಧಿಕಾರಿಗಳಿಗಾಗಲೀ ಅಥವಾ ಜನಪ್ರತಿನಿಧಿಗಳಿಗಾಗಲಿ ಅರಿಯದು, ತಾವು ರೈತ ಸಂಘದ ಸದಸ್ಯರೊಂದಿನೆ ಬರಗಾಲದ ವಿಷಯವಾಗಿ ಚರ್ಚಿಸುತ್ತಿರುವ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಕಂದಾಯ ಸಚಿವರು ಆಗಮಿಸಿದ ವಿಷಯ ತಿಳಿದ ನಾವುಗಳು ತಕ್ಷಣವೇ ತಾಲೂಕು ಕಚೇರಿ ಅವ್ಯವಸ್ಥೆ ಕುರಿತು ಮನವರಿಕೆ ಮಾಡಲು ಮುಂದಾದಾಗ ಕನಿಷ್ಠ ಸೌಜನ್ಯಕ್ಕಾಗಲಿ ರೈತರೊಂದಿಗೆ ಕೆಲ ನಿಮಿಷಗಳನ್ನು ಚರ್ಚಿಸದೆ, ನಾಮಕಾವಸ್ಥೆಗೆ ತಾಲೂಕಿಗೆ ಸಚಿವರು ಬಂದು ಹೋದಂತಾಯಿತು ಎಂದ ಅವರು, ಸಚಿವರ ಕಾರಿನ ಬಳಿಯೇ ಮನವಿ ಸಲ್ಲಿಸುವ ಅನಿವಾರ್ಯತೆ ರೈತರಿಗೆ ಎದುರಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News