ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವು!
ಶಿವಮೊಗ್ಗ, ಮೇ 11: ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆಯ ವೇಳೆ ತಾಯಿಯ ಪಕ್ಕ ಮಲಗಿ ನಿದ್ರಿಸುತ್ತಿದ್ದ ನವಜಾತ ಗಂಡು ಶಿಶುವನ್ನು ಕಳವು ಮಾಡಿ ಕೊಂಡೊಯ್ದಿರುವ ಘಟನೆ ವರದಿಯಾಗಿದೆ. ಈ ನಡುವೆ ಆಸ್ಪತ್ರೆ ಆವರಣದಲ್ಲಿಯೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆವೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭದ್ರಾವತಿ ಪಟ್ಟಣದ ನೆಹರೂ ನಗರದ ನಿವಾಸಿಯಾದ ಜೀವಿತಾ (25) ಎಂಬ ಮಹಿಳೆಯ ಮಗುವನ್ನು ಕದೀಮರು ಕಳವುಗೈದಿರುವುದಾಗಿ ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸರಕಾರಿ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು?:
ಜೀವಿತಾರವರಿಗೆ ಮಂಗಳವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಪರಾಹ್ನ 4 ಗಂಟೆ ಸುಮಾರಿಗೆ ಅವರಿಗೆ ಗಂಡು ಮಗು ಜನಿಸಿದೆ. ತಾಯಿ-ಮಗು ಆರೋಗ್ಯವಾಗಿದ್ದ ಕಾರಣದಿಂದ ರಾತ್ರಿ ಅವರನ್ನು ಆಸ್ಪತ್ರೆಯ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇವರೊಂದಿಗೆ ಸಂಬಂಧಿ ಮಹಿಳೆಯೊಬ್ಬರಿದ್ದರು. ರಾತ್ರಿ ವಾರ್ಡ್‌ನ ಹೊರಭಾಗದಲ್ಲಿ ಮಲಗಿಕೊಂಡಿದ್ದರು. ಮುಂಜಾನೆ ಸರಿಸುಮಾರು 4 ಗಂಟೆಯ ವೇಳೆ ಜೀವಿತಾ ಮಗುವಿಗೆ ಹಾಲುಣಿಸಿದ್ದಾರೆ. ಆದರೆ ಸುಮಾರು 5 ಗಂಟೆಗೆ ಎಚ್ಚರವಾದಾಗ ಪಕ್ಕದಲ್ಲಿ ನಿದ್ರಿಸುತ್ತಿದ್ದ ಮಗು ಇಲ್ಲದಿರುವುದು ಕಂಡುಬಂದಿದೆ. ತಕ್ಷಣವೇ ತಾಯಿ ತನ್ನ ಸಂಬಂಧಿ ಮಹಿಳೆ, ನರ್ಸ್ ಹಾಗೂ ಆಸ್ಪತ್ರೆಯ ಭದ್ರತಾ ಕಾವಲುಗಾರರ ಗಮನಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಮಗುವಿನೊಂದಿಗೆ ಕಳ್ಳರು ಕಣ್ಮರೆಯಾಗಿದ್ದಾರೆ.
ಸಿಸಿ ಕ್ಯಾಮರಾ
: ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಮೂರು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿ ಗಳನ್ನು ಸಂಗ್ರಹಿಸಿರುವ ಡಿವಿಆರ್ ಯಂತ್ರ ವಶಕ್ಕೆ ಪಡೆದಿರುವ ಪೊಲೀಸರು, ದೃಶ್ಯಾ ವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕ್ಯಾಮರಾ ವೊಂದರಲ್ಲಿ ಮಹಿಳೆಯೋರ್ವರು ಮಗು ಕೊಂಡೊಯ್ಯುತ್ತಿರುವ ದೃಶ್ಯಾವಳಿಯಿದ್ದು, ಇದು ಅಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ. ---------------------------------
ಶಂಕಿತೆಯ ವಿಚಾರಣೆ : ಈ ನಡುವೆ ಆಸ್ಪತ್ರೆ ಆವರಣದಲ್ಲಿ ಮುಂಜಾನೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಶಂಕಿತ ಮಹಿಳೆಯೋರ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಗು ನಾಪತ್ತೆಯ ಹಿಂದೆ ಮಹಿಳೆಯ ಕೈವಾಡದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಭದ್ರತೆ ಹೆಚ್ಚಳಕ್ಕೆ ಕ್ರಮ
ಡಿಎಚ್‌ಒ ರಾಜೇಶ್ ಸುರಗೀಹಳ್ಳಿ
ಭದ್ರಾವತಿ ಸರಕಾರಿ ಆಸ್ಪತ್ರೆಯಲ್ಲಿ ಮಗು ನಾಪತ್ತೆ ಪ್ರಕರಣ ಅತ್ಯಂತ ಗಂಭೀರವಾದ ವಿಷಯವಾಗಿದೆ. ಈ ಕುರಿತಂತೆ ತಾವು ಆಸ್ಪತ್ರೆಗೆ ಭೇಟಿನೀಡಿ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸ್, ಭದ್ರತಾ ಸಿಬ್ಬಂದಿಯೊಂದಿಗೆ ಮಾಹಿತಿ ಕಲೆ ಹಾಕಿದ್ದೆನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿ.ಎಚ್.ಒ.) ಡಾ. ರಾಜೇಶ್ ಸುರಗೀಹಳ್ಳಿಯವರು ತಿಳಿಸಿದ್ದಾರೆ. ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿಯೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಪ್ರತಿ ವಿಭಾಗದಲ್ಲಿಯೂ ಸಿ.ಸಿ ಕ್ಯಾಮರಾ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸರಕಾರಿ ಆಸ್ಪತ್ರೆಗಳ ಮುಖ್ಯಸ್ಥ ರಿಗೆ ಸೂಚನೆ ನೀಡಲಾಗಿದೆ. ಸ್ಥಳೀಯ ಪೊಲೀಸರ ಮಾರ್ಗದರ್ಶನದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಮಾಡುವಂತೆ ಸಲಹೆ ನೀಡಲಾಗಿದೆ ಎಂದರು. ಮಗು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಎಲ್ಲ ಮಾಹಿತಿ ಕೊಡಲಾಗಿದೆ. ಪೊಲೀಸರ ತನಿಖೆಯ ನಂತರ ವಷ್ಟೆ ಮಗು ನಾಪತ್ತೆಯ ಹಿಂದಿರುವ ಕಾರಣ ತಿಳಿದುಬರಬೇಕಾಗಿದೆ. ಘಟನೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯ ಲೋಪವಿರುವುದು ಕಂಡು ಬಂದರೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.