×
Ad

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ :ಪ್ರಶ್ನೆಪತ್ರಿಕೆ ಸೋರಿಕೆದಾರ ‘ದ್ವಿತೀಯ ದರ್ಜೆ ಸಹಾಯಕ’

Update: 2016-05-11 22:02 IST

ಸಿಐಡಿ ಅಧಿಕಾರಿಗಳಿಗೆ ಮಾಹಿತಿ

ಬೆಂಗಳೂರು, ಮೇ 11: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯು ಪ್ರಮುಖವಾಗಿ ಸೋರಿಕೆಯಾಗಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಪರಶುರಾಮ್ ಅಗಸಿ ಮಣಿ ಎಂಬಾತನಿಂದ ಎಂದು ಸಿಐಡಿ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯ ರೂವಾರಿ ಸಂತೋಷ್ ಪರಶು ರಾಮ್ ಅಗಸಿ ಮಣಿಯ ಬಂಧನಕ್ಕೆ ಈಗಾಗಲೇ ಸಿಐಡಿ ಅಧಿಕಾರಿಗಳು ಮುಂದಾ ಗಿದ್ದು, ಈತ ಉತ್ತರ ಕನ್ನಡ ಜಿಲ್ಲೆಯ ತೇರ್‌ಗಾಂವ್ ಗ್ರಾಮದ ನಿವಾಸಿಯಾಗಿದ್ದಾನೆ. ಅಲ್ಲದೆ, ಮೂರು ದಿನಗಳ ಹಿಂದೆ ಹಳಿಯಾಳ ತಾಲೂಕಿನಲ್ಲಿರುವ ಸಂಬಂಧಿಕರ ಜೊತೆ ಜಗಳವಾಡಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೀಗಾಗಿ, ವೈದ್ಯಾಧಿಕಾರಿಗಳ ಸೂಚನೆಯ ಬಳಿಕ ಆರೋಪಿಯನ್ನು ದಸ್ತಗಿರಿ ಮಾಡಿ ಕ್ರಮ ಜರಗಿಸಲಾಗುವುದು ಎಂದು ಸಿಐಡಿ ಸ್ಪಷ್ಟಪಡಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್‌ಪಿನ್ ಶಿವಕುಮಾರಯ್ಯನ ಅಣ್ಣನ ಮಗ ಕುಮಾರಸ್ವಾಮಿ ಯಾನೆ ಕಿರಣ್(35)ನನ್ನು ಮೇ 10ರಂದು ಸಂಜೆ ತುಮಕೂರು ಹೊರವಲಯದಲ್ಲಿ ಬಂಧಿಸಲಾಗಿದೆ.
 ಈತನನ್ನು ವಿಚಾರಣೆ ಗೊಳಪಡಿಸಿದಾಗ ಹಾವೇರಿ ಜಿಲ್ಲೆ ಹಾನಗಲ್‌ನ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಪರಶುರಾಮ್ ಅಗಸಿ ಮಣಿ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಎಂದು ಬಾಯ್ಬಿಟ್ಟಿದ್ದಾನೆ.

 ಸೋರಿಕೆ ಪ್ರಕರಣದ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಡಿ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ, ಈವರೆಗೂ ಸೋರಿಕೆ ಪ್ರಕರಣದಲ್ಲಿ 14 ಆರೋಪಿಗಳನ್ನು ಬಂಧಿಸಲಾಗಿದೆ. 2016ರ ಮಾರ್ಚ್‌ನಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆ 2ನೆ ಬಾರಿ ಮರುಪರೀಕ್ಷೆ ಏರ್ಪಡಿಸಿದಾಗಲೂ ಸೋರಿಕೆಯಾಗಿತ್ತು. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ 618, 420, 201, 381 ಕಲಂಗಳಡಿ ಪ್ರಕರಣ ದಾಖಲಾಗಿ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ನಿನ್ನೆ ಸಿಐಡಿ ಮಾಹಿತಿ ಮೇರೆಗೆ ಕಿರಣ್‌ನನ್ನು ಬಂಧಿಸಲು ಸಿಐಡಿ ಅಧಿಕಾರಿಗಳು ಹೋದಾಗ, ಆತ ತಾನು ಕಿರಣ್ ಅಲ್ಲ ಎಂದು ವಾದಿಸಿದ್ದು, ಪೊಲೀಸರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಬಾತ್ಮೀದಾರರು ಆತನೇ ಕಿರಣ್ ಎಂದು ಖಚಿತಪಡಿಸಿದ್ದಾರೆ. ನಿನ್ನೆ ಸಂಜೆ 4 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಸೋರಿಕೆ ಇಲ್ಲಿಂದಲೇ: ಕಿರಣ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪರಶುರಾಮ್ ಅಗಸಿ ಮಣಿಯ ಪ್ರಮುಖ ಪಾತ್ರವಿರುವುದಾಗಿ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ಈ ಮೊದಲು ಹಲವಾರು ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಗಳು ಖಜಾನೆಗೆ ಬಂದಾಗ ಪರಶುರಾಮ್ ಅಗಸಿ ಮಣಿ ಆರೋಪಿಗಳಿಗೆ ಖಜಾನೆಯ ಬೀಗದ ಕೈಯನ್ನು ಕೊಡುತ್ತಿದ್ದ. ಅದರಿಂದ ಪ್ರಶ್ನೆಪತ್ರಿಕೆಗಳನ್ನು ತೆಗೆದು ಅವುಗಳ ಛಾಯಾಚಿತ್ರಗಳನ್ನು ಮೊಬೈಲ್‌ನಿಂದ ತೆಗೆದುಕೊಂಡು ವಾಪಸ್ ಅಲ್ಲಿಯೇ ಇಡುತ್ತಿದ್ದುದಾಗಿ ಆರೋಪಿ ಕಿರಣ್ ತಿಳಿಸಿದ್ದಾನೆ. ರಸಾಯನಶಾಸ್ತ್ರ ವಿಷಯದ ಎರಡು ಬಾರಿ ಪರೀಕ್ಷೆ ನಡೆದಾಗಲೂ ಹಾನಗಲ್ ಉಪಖಜಾನೆಯಿಂದಲೇ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದಾಗಿ ಕಿರಣ್ ತಿಳಿಸಿದ್ದಾನೆ. ಜೊತೆಗೆ ಈ ಮೊದಲು ಹಲವಾರು ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನು ಇಲ್ಲಿಂದಲೇ ಸೋರಿಕೆ ಮಾಡಿದ್ದಾಗಿ ಆರೋಪಿ ವಿವರ ನೀಡಿದ್ದಾನೆ.

ಆರೋಪಿಯ ಮಾಹಿತಿ ಆಧರಿಸಿ ಸಿಐಡಿಯ ಎಸ್ಪಿಗಳಾದ ಸಿರಿಗೌರಿ, ಮಾಸಿನ್ ಮಾರ್ಬನ್ ಯಾಂಗ್ ನೇತೃತ್ವದಲ್ಲಿ ಸಿಐಡಿ ಪೊಲೀಸರು ಹಾನಗಲ್‌ಗೆ ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ. ದ್ವಿತೀಯ ಪಿಯುಸಿ ರಸಾಯನಶಾಸ್ತ್ರದ ಮರು ಪರೀಕ್ಷೆ ರದ್ದಾಗಿದ್ದರಿಂದ ಪ್ರಶ್ನೆಪತ್ರಿಕೆಗಳು ಖಜಾನೆಯಲ್ಲೇ ಉಳಿದುಕೊಂಡಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದರು.
ಆರೋಪಿ ಕಿರಣ್‌ನನ್ನು ಸಂಘಟಿತ ಅಪರಾಧ ನಿಯಂತ್ರಣಾ ಕಾಯ್ದೆಯಡಿ ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗುವುದು. ಈಗಾಗಲೇ ಪ್ರಮುಖ ಆರೋಪಿ ಶಿವಕುಮಾರ್ ಕೂಡ ಪೊಲೀಸ್ ವಶದಲ್ಲಿದ್ದು, ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಎಲ್ಲರನ್ನು ವಿಚಾರಣೆಗೊಳಪಡಿಸುವುದಾಗಿ ಅವರು ಇದೇ ವೇಳೆ ಹೇಳಿದರು.
ಬಂಧನವಿಲ್ಲ: ಸೋರಿಕೆಯಾದ ಪ್ರಶ್ನೆಪತ್ರಿಕೆಗಳ ಲಾಭ ಪಡೆದವರನ್ನು ಬಂಧಿಸುವ ಉದ್ದೇಶವಿಲ್ಲ. ನಿರಂತರವಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ಲಾಭ ಪಡೆದು ಎಲ್ಲ ಪರೀಕ್ಷೆಗಳನ್ನು ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಉಪಯೋಗಿಸಿಕೊಂಡಿರುವುದು ಖಚಿತಪಟ್ಟರೆ ಅಂತಹ ವಿದ್ಯಾರ್ಥಿಗಳನ್ನು ವಿಚಾರಣೆಗೆ ಕರೆಯಲಾಗುವುದೆಂದು ಹೇಳಿದರು.


ತಪ್ಪಿಸಿಕೊಳ್ಳಲು ತಲೆ-ಮೀಸೆ ಬೋಳಿಸಿಕೊಂಡ ...!
  
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ತಲೆ, ಮೀಸೆ ಬೋಳಿಸಿಕೊಂಡು ಆರೋಪಿ ಕಿರಣ್ ತಲೆಮರೆಸಿಕೊಂಡಿದ್ದ. ಅಲ್ಲದೆ, ತುಮಕೂರಿನ ತೋಟದ ಮನೆಗೆ ಅಪರಿಚಿತರು ಬಂದು ಹೆಸರು ಕೇಳಿದಾಗ ಬೇರೆ ಹೆಸರನ್ನು ಹೇಳುತ್ತಿದ್ದ.

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ದ್ವಿತೀಯ ದರ್ಜೆ ಸಹಾಯಕನಿಂದ ಎಂದು ತಿಳಿದು ಬಂದಿದೆ. ಆದರೆ, ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವವರೆಗೂ ತನಿಖೆ ಮುಂದುವರಿಸಲಾಗುವುದು.
 ಕಿಶೋರ್ ಚಂದ್ರ, ಸಿಐಡಿ ಪೊಲೀಸ್ ಮಹಾನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News