ಶುದ್ಧೀಕರಣ ಘಟಕಕ್ಕೆ ಹೊಸ ಮೋಟಾರ್ ಖರೀದಿ: ಮೇಯರ್ ಮರಿಯಪ್ಪ
ಶಿವಮೊಗ್ಗ, ಮೇ 11: ಶಿವಮೊಗ್ಗ ನಗರದ ಮಂಡ್ಲಿಯಲ್ಲಿರುವ ಕೃಷ್ಣ ರಾಜೇಂದ್ರ ನೀರು ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ಕಾರಣದಿಂದ ಮೋಟಾರ್‌ಗಳು ಸುಟ್ಟು ಹೋದ ಪರಿಣಾಮ, ಮಂಗಳವಾರ ವಿವಿಧ ಬಡಾವಣೆಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಕೊನೆಗೂ ಮಹಾನಗರ ಪಾಲಿಕೆ ಆಡಳಿತ ಯಶಸ್ವಿಯಾಗಿದೆ.
ಬುಧವಾರ ಮಧ್ಯಾಹ್ನದಿಂದಲೇ ಕೃಷ್ಣ ರಾಜೇಂದ್ರ ನೀರು ಶುದ್ಧೀಕರಣ ಘಟಕದಿಂದ ಟ್ಯಾಂಕ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ನೀರಿಲ್ಲದೆ ಪರಿತಪಿಸುತ್ತಿದ್ದ ವಿವಿಧ ಬಡಾವಣೆಗಳ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ. ಪಾಲಿಕೆ ಆಡಳಿತದ ಸಮರೋಪಾದಿ ಕ್ರಮದಿಂದ ನಿರೀಕ್ಷಿಗಿಂತ ಮುಂಚಿತವಾಗಿಯೇ ಸಮಸ್ಯೆ ಪರಿಹಾರವಾಗುವಂತಾಗಿದೆ. ಸುದ್ದಿಗಾರರೊಂದಿಗೆ ಮೇಯರ್ ಎಸ್.ಕೆ.ಮರಿಯಪ್ಪ ಮಾತನಾಡಿ, ಹಳೆಯ ಮೋಟಾರ್ ದುರಸ್ತಿಗೆ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗಬಾರದೆಂಬ ಕಾರಣದಿಂದ 270 ಎಚ್.ಪಿ. ಸಾಮರ್ಥ್ಯದ ಹೊಸ ಮೋಟಾರ್ ಖರೀದಿಸಿ, ನೀರು ಶುದ್ಧೀಕರಣ ಘಟಕದಲ್ಲಿ ಅಳವಡಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎರಡು ಮೋಟಾರ್‌ಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೋಟಾರ್‌ಗಳನ್ನು ಕೂಡ ಶುದ್ಧೀಕರಣ ಘಟಕದಲ್ಲಿಯೇ ಇರಿಸಲಾಗುವುದು. ಅಗತ್ಯವಿದ್ದ ವೇಳೆ ಬಳಕೆ ಮಾಡಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ. ವ್ಯತ್ಯಯ:
ಕಳೆದ ಒಂದು ವಾರದ ಹಿಂದೆ ಕೆ.ಆರ್.ವಾಟರ್ ವರ್ಕ್ಸ್‌ನಲ್ಲಿನ ಮೋಟಾರ್‌ವೊಂದು ದುರಸ್ತಿಯಾಗಿತ್ತು. ಸ್ಟ್ಯಾಂಡ್ ಬೈ ಮೋಟಾರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಮಂಗಳವಾರ ಮುಂಜಾನೆ ತಾಂತ್ರಿಕ ಕಾರಣಗಳಿಂದ ಈ ಮೋಟಾರ್ ಕೂಡ ಸುಟ್ಟು ಹೋಗಿತ್ತು. ಇದರಿಂದ ತುಂಗಾನಗರ ಹಾಗೂ ಡಿಸಿ ಕಾಂಪೌಂಡ್ ಸಮೀಪದ ತಲಾ ಎರಡು ಟ್ಯಾಂಕ್, ಮಿಳಘಟ್ಟ, ರಾಜೇಂದ್ರನಗರ, ಜಿಪಂ, ರವೀಂದ್ರನಗರ, ನೆಹರೂ ಕ್ರೀಡಾಂಗಣ ಸಮೀಪದ ತಲಾ ಒಂದೊಂದು ಟ್ಯಾಂಕ್ ಹಾಗೂ ಪ್ರವಾಸಿ ಮಂದಿರದ ಸಮೀಪವಿರುವ ಬೂಸ್ಟರ್ ಕೇಂದ್ರಕ್ಕೆ ನೀರು ಪೂರೈಕೆಯಾಗಿರಲಿಲ್ಲ. ಇದರಿಂದ ಈ ಓವರ್‌ಹೆಡ್ ಟ್ಯಾಂಕ್‌ಗಳ ಮೂಲಕ ನೀರು ಪೂರೈಕೆಯಾಗುವ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವಂತಾಗಿತ್ತು.
ಫಲಕೊಟ್ಟ ಅಧಿಕಾರಿಗಳ ಪರಿಶ್ರಮ
: ಮೋಟಾರ್ ಸುಟ್ಟು ಹೋಗಿದ್ದರಿಂದ ಅರ್ಧ ನಗರಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಇದು ಪಾಲಿಕೆ ಅಧಿಕಾರಿಗಳ ನಿದ್ದೆಗೆಡುವಂತೆ ಮಾಡಿತ್ತು. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಗಣೇಶ್ ನೇತೃತ್ವದ ಅಧಿಕಾರಿಗಳ ತಂಡವು ಹಗಲಿರುಳು ನಡೆಸಿದ ಪರಿಶ್ರಮ ಯಶಸ್ವಿಯಾಗಿದೆ. ನೀರು ಪೂರೈಕೆಯಲ್ಲಾಗಿದ್ದ ವ್ಯತ್ಯಯ ಪರಿಹಾರ ವಾಗುವಂತಾಗಿದೆ.