ಸಿಡಿಲು ಬಡಿದು ಓರ್ವ ಮಹಿಳೆ ಮೃತ್ಯು
ಮೂಡಿಗೆರೆ, ಮೇ 12: ಸಿಡಿಲು ಬಡಿದು ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ನಂದೀಪುರ ಗ್ರಾಮದ ಕಾಫಿ ತೋಟವೊಂದರಲ್ಲಿ ಗುರುವಾರ ನಡೆದಿದೆ.
ಮೃತ ಮಹಿಳೆಯನ್ನು ಬೇಲೂರಿನ ರತ್ನಮ್ಮ (51) ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಮೂವರು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ. ಬೇಲೂರಿನಿಂದ ಬಂದು ನಂದೀಪುರ ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿರುವ ವೇಳೆೆಯಲ್ಲಿ ಗುರುವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯರನ್ನು ಬೇಲೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರತ್ನಮ್ಮಳ ಮೃತದೇಹದ ಮರಣೋತ್ತರ ಪರೀಕ್ಷೆಗೆ ಬೇಲೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೂಡಿಗೆರೆ ಪಟ್ಟಣಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಮೂಡಿಗೆರೆ ತಾಲೂಕಿನಲ್ಲಿ ಕಳೆದ 10 ದಿನಗಳಲ್ಲಿ ಮೂರನೆ ಪ್ರಕರಣವಾಗಿದೆ. ಕಳೆದ 10 ದಿನಗಳ ಹಿಂದೆ ಕುನ್ನಹಳ್ಳಿ ಎಂಬಲ್ಲಿ ಯುವತಿಯೋರ್ವಳಿಗೆ ಸಿಡಿಲು ಬಡಿದು ಗಂಭೀರ ಗಾಯಗಳಾಗಿ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 11ರಂದು ಚಾರ್ಮಾಡಿ ಘಾಟ್‌ನಲ್ಲಿ ದಿಲ್ಲಿ ಮೂಲದ ಮೂವರು ಬೆಡ್‌ಶೀಟ್ ವ್ಯಾಪಾರಿಗಳಿಗೆ ಸಿಡಿಲು ಬಡಿದು ಗಂಭೀರ ಗಾಯಗೊಂಡು ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.