ಕಾರು-ಬೈಕ್ ಢಿಕ್ಕಿ: ಇರಾನಿ ಪ್ರಜೆಗಳು ವಶಕ್ಕೆ
ಕಾರವಾರ, ಮೇ 12: ನಿರ್ಲಕ್ಷವಾಗಿ ಹಾಗೂ ಅಜಾಗರೂಕತೆಯಿಂದ ವೇಗವಾಗಿ ಕಾರು ಚಾಲನೆ ಮಾಡಿ, ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಇರಾನ್ ದೇಶ ಮೂವರು ಪ್ರವಾಸಿಗರನ್ನು ಕಾರವಾರದ ಗ್ರಾಮೀಣ ಠಾಣೆಯ ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ
ಗೋವಾ ನೋಂದಣಿಯ ಕಾರಿನಲ್ಲಿದ್ದ ಬೆನೆಹಂ ಬೊಡಗಿ, ಅಜೀಂ ರಸ್ತಗರಿ ಹಾಗೂ ಮೊರಾದ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಕೈಗೊಂಡಿದ್ದಾರೆ. ಕುಮಟಾ ಕಡೆಯಿಂದ ಗೋವಾದತ್ತ ರಾಷ್ಟ್ರೀಯ ಹೆದ್ದಾರಿ -17ರಲ್ಲಿ ವೇಗವಾಗಿ ಬಂದ ಈ ಕಾರು ನಗರದ ಬೈತ್‌ಖೋಲ್ ಬಳಿ ಬೈಕ್‌ಗೆ ಢಿಕ್ಕಿ ಹೊಡೆಯಿತು. ಘಟನೆಯಲ್ಲಿ ಬೈಕ್ ಸವಾರ ವಿರೇಶ್ ನಾಯ್ಕ ಎಂಬವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಆದರೆ ಕಾರನ್ನು ನಿಲ್ಲಿಸದೆ ಮುಂದೆ ಸಾಗುತ್ತಿದ್ದಾಗ, ಸಾರ್ವಜನಿಕರು ಪೊಲೀಸರಿಗೆ ಸುದ್ದಿ ನೀಡಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಗೋವಿಂದ ದಾಸರಿ ನೇತೃತ್ವದ ತಂಡ, ಕಾರನ್ನು ಅಡ್ಡಗಟ್ಟಲು ನಗರದ ಹೊರವಲಯದ ಬಳಿ ಸಿದ್ಧವಾಗಿತ್ತು. ಆದರೆ ಇರಾನಿಗಳು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು. ನಂತರ ಕಾರನ್ನು ಬೆನ್ನಟ್ಟಿದ ಪೊಲೀಸರು ನಗರದ ಲಂಡನ್ ಸೇತುವೆ ಬಳಿ ತಡೆದು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.
ಗೋವಾಕ್ಕೆ ಪ್ರವಾಸ ಬಂದಿದ್ದ ಈ ಮೂವರು ಇರಾನಿಗಳು ಅಲ್ಲಿಂದ ಕಾರಿನಲ್ಲಿ ಜಿಲ್ಲೆಯ ಮುರುಡೇಶ್ವರ, ಗೋಕರ್ಣಕ್ಕೆ ಬಂದಿದ್ದರು. ಮರಳಿ ಗೋವಾಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ. ಗೋವಾ ನೋಂದಣಿಯ ಕಾರ್‌ನಲ್ಲಿ ಬಿಯರ್ ಬಾಟಲಿಗಳಿದ್ದು ಮದ್ಯ ಸೇವನೆ ಮಾಡಿರುವ ಬಗ್ಗೆ ತಪಾಸಣೆ ನಡೆಸಲಾಗಿದೆ. ದೂರು ದಾಖಲಾಗಿದೆ