×
Ad

ನಿರ್ಧಾರ ವಿರೋಧಿಸಿ ಅಣ್ಣಾ ಹಝಾರೆ ಸಮಿತಿ ಪ್ರತಿಭಟನೆ

Update: 2016-05-12 22:12 IST

ಶಿವಮೊಗ್ಗ, ಮೇ 12: ಶಿವಮೊಗ್ಗ ನಗರದಲ್ಲಿ ಪ್ರಾಪರ್ಟಿ ಕಾರ್ಡ್ (ಪಿಆರ್) ಮಾಡಿಸದ ಸ್ಥಿರಾಸ್ತಿಯನ್ನು ಸರಕಾರಿ ಆಸ್ತಿಯಾಗಿ ಘೋಷಣೆ ಮಾಡಲಾಗುವುದೆಂಬ ಸರ್ವೇ ಇಲಾಖೆ ಆಯುಕ್ತ ಮನೀಷ್ ವೌದ್ಗಿಲ್ ಹೇಳಿಕೆ ವಿರೋಧಿಸಿ, ಅಣ್ಣಾ ಹಝಾರೆ ಹೋರಾಟ ಸಮಿತಿಯು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ತದನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿತು. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸ್ಥಿರಾಸ್ತಿಗೆ ಪಿಆರ್‌ಕಾರ್ಡ್ ಮಾಡಿಸುವ ಯೋಜನೆಯನ್ನು ಶಿವಮೊಗ್ಗ ನಗರದಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಈ ಯೋಜನೆಯ ಬಗ್ಗೆ ಸ್ಥಳೀಯ ಸ್ಥಿರಾಸ್ತಿ ಮಾಲಕರಿಗೆ ಸ್ಪಷ್ಟ ಮಾಹಿತಿಯಿಲ್ಲವಾಗಿದೆ. ಇಲಾಖೆ ಕೂಡ ಯಾವುದೇ ಪೂರ್ವಸಿದ್ಧತೆಯಿಲ್ಲದೆ ಯೋಜನೆ ಅನುಷ್ಠಾನಗೊಳಿಸಿದ್ದು, ಇದಕ್ಕೆ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ಯೋಜನೆ ಕಾರ್ಯಗತಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶಿವಮೊಗ್ಗ ನಗರಕ್ಕಾಗಮಿಸಿದ್ದ ಸರ್ವೇ ಇಲಾಖೆಯ ಆಯುಕ್ತ ಮನೀಷ್ ವೌದ್ಗಿಲ್‌ರವರು ಪ್ರತಿಯೋರ್ವ ಸ್ಥಿರಾಸ್ತಿ ಮಾಲಕರು ಪಿಆರ್‌ಕಾರ್ಡ್ ಮಾಡಿಸಬೇಕು. ಒಂದು ತಿಂಗಳೊಳಗೆ ಪಿಆರ್‌ಕಾರ್ಡ್ ಮಾಡಿಸಲು ಮಾಹಿತಿ ನೀಡದಿದ್ದರೆ, ಅಂತಹ ಆಸ್ತಿಯನ್ನು ಸರಕಾರಿ ಆಸ್ತಿಯಾಗಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಸ್ಥಿರಾಸ್ತಿ ಮಾಲಕರು ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಮಹಾನಗರ ಪಾಲಿಕೆಯ ಸದಸ್ಯರು ಕೂಡ ಪ್ರಾಪರ್ಟಿ ಕಾರ್ಡ್ ಕಡ್ಡಾಯದ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ. ಹಾಗೆಯೇ ನಾಗರಿಕರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೂ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿರುವ ಭ್ರಷ್ಟ ೂ ಕಬಳಿಕೆದಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಲಿ. ಆದರೆ ಈ ವಿಷಯದಲ್ಲಿ ಯಾವುದೇ ಕ್ರಮಕೈಗೊಳ್ಳದೆ, ನಾಗರಿಕರಿಗೆ ತೊಂದರೆಗೀಡು ಮಾಡುವಂತಹ ಯೋಜನೆ ಜಾರಿಗೊಳಿಸಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತತ್‌ಕ್ಷಣವೇ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ಸರ್ವೇ ಇಲಾಖೆಯ ವಿರುದ್ಧ ಸಂಘಟನೆಯವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಚಿಕ್ಕಸ್ವಾಮಿ, ಅಶೋಕ್ ಯಾದವ್, ರಾಜು, ಸತೀಶ್‌ಕುಮಾರ್ ಶೆಟ್ಟಿ, ಜನಮೇಜಿರಾವ್, ರುದ್ರಪ್ಪ, ತಿಮ್ಮಪ್ಪ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News