×
Ad

ನಾಪತ್ತೆಯಾದ ನವಜಾತ ಶಿಶುವಿನ ಸುಳಿವು

Update: 2016-05-12 22:22 IST

ಶಿವಮೊಗ್ಗ, ಮೇ 12: ಭದ್ರಾವತಿಯ ಸರಕಾರಿ ಆಸ್ಪತ್ರೆಯಿಂದ ಕಳವು ಮಾಡಲಾದ ನವಜಾತ ಗಂಡು ಶಿಶುವಿನ ಸುಳಿವು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಇದು ಪೋಷಕರ ದುಃಖ ಇಮ್ಮಡಿಗೊಳ್ಳುವಂತೆ ಮಾಡಿದ್ದು, ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಪೊಲೀಸರು ಶಿಶುವಿನ ಪತ್ತೆಗೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದು, ತನಿಖೆ ಬಿರುಸುಗೊಳಿಸಿದ್ದಾರೆ. ವಿಚಾರಣೆ: ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪೊಲೀಸರು ಅನುಮಾನದ ಮೇರೆಗೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಡೆದ ವೇಳೆ ಕರ್ತವ್ಯದಲ್ಲಿದ್ದ ಕಾವಲುಗಾರರು ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿಯಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಶಿಶುವಿನ ಸುಳಿವಿಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿಲ್ಲವೆಂದು ಪೊಲೀಸ್ ಇಲಾಖೆಯ ಮೂಲಗಳು

ಮಾಹಿತಿ ನೀಡಿವೆ. ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾಂತೆಯೇ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಶಿಶುವಿನ ಪತ್ತೆಗೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ನಾನಾ ಮೂಲಗಳಿಂದ ಮಾಹಿತಿ ಸಂಗ್ರಹಿಸುವ ಕೆಲಸ ಮುಂದುವರಿಸಿದ್ದಾರೆ. ಸದ್ಯದ ಮಟ್ಟಿಗೆ ಶಿಶುವಿನ ಸುಳಿವಿನ ಬಗ್ಗೆ ಯಾವುದೇ ಮಾಹಿತಿಯಿಲ್ಲವಾಗಿದೆ. ನಾನಾ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದೇವೆ. ಶೀಘ್ರದಲ್ಲಿಯೇ ಶಿಶು ಪತ್ತೆ ಹಚ್ಚಲಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

  ಅಸ್ಪಷ್ಟ ದೃಶ್ಯ: ಆಸ್ಪತ್ರೆಯ ಆವರಣದಲ್ಲಿ ಅಳವಡಿಸಲಾಗಿರುವ ಸಿ.ಸಿ.ಕ್ಯಾಮರಾವೊಂದರಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಮಹಿಳೆಯೋರ್ವರು ಕೈಯಲ್ಲಿ ಏನನ್ನೋ ಕೊಂಡೊಯ್ಯುತ್ತಿರುವ ಕೆಲವು ಸೆಕೆಂಡುಗಳು ದೃಶ್ಯ ಸೆರೆಯಾಗಿದೆ. ಆದರೆ ಮುಖ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತಿವೆ. ಘಟನೆ ಹಿನ್ನೆಲೆ: ಪ್ರಸ್ತುತ ಅರಸೀಕೆರೆಯಲ್ಲಿ ಪತಿಯೊಂದಿಗೆ ನೆಲೆಸಿರುವ ಜೀವಿತಾ (25) ಎಂಬ ಮಹಿಳೆ ಗರ್ಭೀಣಿಯಾಗಿದ್ದ ಕಾರಣದಿಂದ ಭದ್ರಾವತಿಯ ತವರುಮನೆಯಲ್ಲಿದ್ದರು. ಮಂಗಳವಾರ ಬೆಳಗ್ಗೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ 4 ಗಂಟೆ ಸುಮಾರಿಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗು ಆರೋಗ್ಯವಾಗಿದ್ದ ಕಾರಣದಿಂದ ರಾತ್ರಿ ಅವರನ್ನು ಆಸ್ಪತ್ರೆಯ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇವರೊಂದಿಗೆ ಸಂಬಂಧಿ ಮಹಿಳೆಯೊಬ್ಬರಿದ್ದು, ರಾತ್ರಿ ವಾರ್ಡ್‌ನ ಹೊರಭಾಗದಲ್ಲಿ ಮಲಗಿಕೊಂಡಿದ್ದರು. ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ತಾಯಿ ಮಗುವಿಗೆ ಹಾಲುಣಿಸಿದ್ದಾರೆ. ಆದರೆ ಸುಮಾರು 5 ಗಂಟೆಗೆ ಎಚ್ಚರವಾದಾಗ ಪಕ್ಕದಲ್ಲಿದ್ದ ಮಗು ನಾಪತ್ತೆಯಾಗಿತ್ತು. ತಕ್ಷಣವೇ ಜೀವಿತಾ ನರ್ಸ್ ಹಾಗೂ ಆಸ್ಪತ್ರೆಯ ಭದ್ರತಾ ಕಾವಲುಗಾರರ ಗಮನಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಮಗುವಿನೊಂದಿಗೆ ಕಳ್ಳರು ನಾಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News