ಮೊದಲ ಹಂತದಲ್ಲಿ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ
ಕಾರವಾರ, ಮೇ 12: ತಾಲೂಕಿನಲ್ಲಿ ಸೀಬರ್ಡ್ ನೌಕಾನೆಲೆಯಲ್ಲಿ ನೌಕಾಪಡೆ ಉದ್ದೇಶಕ್ಕೆ ರನ್‌ವೇ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ನಾಗರಿಕ ವಿಮಾನಯಾನಕ್ಕೆ ಅನುಕೂಲವಾಗುವಂತೆ ಏರ್‌ಸ್ಟ್ರಿಪ್ ನಿರ್ಮಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ೈರೆಕ್ಟರ್ ನವೀನ್‌ರಾಜ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಗರಿಕ ವಿಮಾನಯಾನ ಸೇವೆಗೆ ಸೌಲಭ್ಯ ಕಲ್ಪಿಸುವುದಕ್ಕಿಂತ ಸೀಮಿತ ಮಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಆರಂಭಿಕ ಹಂತದಲ್ಲಿ ಪರಿಶೀಲನೆ ನಡೆಸಲಾಗುವುದು. ಗೋವಾ ರಾಜ್ಯಕ್ಕೆ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಚಾರ್ಟರ್ ವಿಮಾನಗಳಲ್ಲಿ ಬರುತ್ತಿದ್ದು, ಈ ರೀತಿಯ ಚಾರ್ಟರ್ ವಿಮಾನಗಳು ಬಂದಿಳಿಯಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದರು. ಸೀಬರ್ಡ್ ಎರಡನೆ ಹಂತದಲ್ಲಿ ನೌಕಾನೆಲೆಯಲ್ಲಿ ರನ್‌ವೇ ನಿರ್ಮಿಸಲಾಗುತ್ತಿದೆ. ಇದನ್ನು ನಾಗರಿಕ ವಿಮಾನಯಾನಕ್ಕೆ ಬಳಸಿಕೊಳ್ಳುವುದರ ಕುರಿತು ಸಕಾರಾತ್ಮಕ ಅಭಿಪ್ರಾಯಗಳು ಮೂಡಿಬಂದಿವೆ. ನೌಕಾನೆಲೆಗೆ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನು ಹಾಗೂ ಕೆಲ ಅರಣ್ಯ ಭೂಮಿಗಳನ್ನು ಬಳಸಿಕೊಂಡು ಈ ಮೂಲಸೌಕರ್ಯ ಕಲ್ಪಿಸಬಹುದಾಗಿದೆ ಎಂದು ಅವರು ಹೇಳಿದರು.
ಸ್ಥಳ ಪರಿಶೀಲನೆ: ಏರ್‌ಸ್ಟ್ರಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂಕೋಲಾ ತಾಲೂಕಿನ ನೆಲೂರ ಕಂಚಿನಬೈಲ್ ಹಾಗೂ ಅಲಗೇರಿ ಗ್ರಾಮಗಳಿಗೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ ಕರ್ಜಗಿ, ಅಂಕೋಲಾ ಹುಬ್ಬಳ್ಳಿ ಬ್ರಾಡ್‌ಗೇಜ್ ರೈಲ್ವೆ ವಿಶೇಷ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರವಾರ ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ್, ಕುಮಟಾ ಉಪವಿಭಾಗಾಧಿಕಾರಿ ಶೋಭಾ, ನೌಕಾನೆಲೆಯ ಹಿರಿಯ ಅಧಿಕಾರಿಗಳು ಸೇರಿ ದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.