ಮದ್ಯದಂಗಡಿ ತೆರವಿಗೆ ಪ್ರತಿಭಟನೆ
ಚಿಕ್ಕಮಗಳೂರು, ಮೇ 13: ತಾಲೂಕಿನ ಆವತಿಯಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಮತ್ತು ಆವತಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಆವತಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಸಮೀಪದಲ್ಲೇ ಮದ್ಯದಂಗಡಿಯನ್ನು ತೆರೆಯಲಾಗಿದ್ದು. ಈ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಮತ್ತು ನೂರಾರು ದಲಿತ ಕುಟುಂಬಗಳೇ ಹೆಚ್ಚಿವೆ ಕೂಲಿ ಮಾಡುವ ಬಡ ವರ್ಗದ ಜನರು ಈ ಅಂಗಡಿಯಿಂದ ತೀವ್ರ ತೊಂದರೆ ಎದುರಿಸುತ್ತಿದ್ದು, ಕೂಡಲೇ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಶಾಲೆ, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಿಂದ ನೂರು ಮೀಟರ್ ಅಂತರದಲ್ಲಿ ಲೈಸೆನ್ಸ್ ಹೊಂದಿರುವ ಮದ್ಯದಂಗಡಿಯನ್ನು ತೆರೆಯಬೇಕೆಂಬ ನಿಯಮವಿದ್ದರೂ ನಿಯಮವನ್ನು ಉಲ್ಲಂಘಿಸಿ ಶಾಲೆ, ಗ್ರಾಪಂ ಕಾರ್ಯಾಲಯ, ಸೊಸೈಟಿ, ಬ್ಯಾಂಕ್, ಶಾಲಾ ಕ್ರೀಡಾಂಗಣ, ಕೃಷಿ ಇಲಾಖೆ, ದೇವಸ್ಥಾನ, ನೆಮ್ಮದಿ ಕೇಂದ್ರ, ಗ್ರಂಥಾಲಯ ಹತ್ತಿರವೇ ಮದ್ಯದಂಗಡಿಯನ್ನು ತೆರೆಯಲಾಗಿದೆ ಎಂದು ದೂರಿದ್ದಾರೆ.
ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದರೂ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಮದ್ಯದಂಗಡಿ ತೆರವುಗೊಳಿಸಲು ಮುಂದಾಗದೇ ಮೌನ ವಹಿಸಿದ್ದಾರೆ. ಗ್ರಾಪಂ ಅಧಿಕಾರಿಗಳಿಗೆ ಮದ್ಯದಂಗಡಿ ತೆರವುಗೊಳಿಸಲು ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಮನವಿಯಲ್ಲಿ ಜನರ ಅಭಿವೃದ್ಧಿಗಾಗಿ ಬೇಕಾಗಿರುವ ಯೋಜನೆಗಳನ್ನು ಜಾರಿಗೆ ತರಬೇಕು, ಜನ ವಿರೋಧಿಯಾಗಿರುವ ಮದ್ಯದಂಗಡಿಗಳನ್ನು ಕೂಡಲೇ ರದ್ದುಮಾಡಬೇಕು. ಮತ್ತು ಹೊಸದಾಗಿ ಮದ್ಯಪಾನದ ಅಂಗಡಿಯನ್ನು ತೆರೆಯಲು ಲೈಸೆನ್ಸ್ ನೀಡಬಾರದು ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಕಾಂ. ಲಲಿತಾ, ಜಿಲ್ಲಾ ಸಹಕಾರ್ಯದರ್ಶಿ ಕಾಂ. ಸುನೀತಾ ಆವತಿ, ಶಾಲಿನಿ, ಇಂದ್ರಾ, ಪಾರ್ವತಿ, ರುಕ್ಮಿಣಿ, ರೇಣುಕಾ, ಎನ್.ವಿ.ನವ್ಯಾ, ಎನ್.ಆರ್.ಶ್ವೇತಾ, ನಿರ್ಮಲಾ, ಲತಾ ಮತ್ತಿತರರು ಉಪಸ್ಥಿತರಿದ್ದರು.