ಉದ್ಘಾಟನೆ ಭಾಗ್ಯವಿಲ್ಲದ ಅಂಗನವಾಡಿ ಕಟ್ಟಡ
ಚಿಕ್ಕಮಗಳೂರು, ಮೇ 13: ಕಳೆದ 2 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಕ್ಕೆ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ.
ತೊಗರಿಹಂಕಲ್ ಗ್ರಾಪಂನ ಗುಡ್ಡೇನಹಳ್ಳಿ ಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಬಳಸಲು ಯೋಗ್ಯವಾಗಿದ್ದರೂ ಸಹ ಅಧಿಕಾರಿಗಳು ಕಟ್ಟಡದ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ಕಟ್ಟಡದ ಸುತ್ತಮುತ್ತ ಗಿಡ ಗಂಟಿಗಳು ಬೆಳೆದು ಕಟ್ಟಡದ ಸೌಂದರ್ಯವನ್ನು ಹಾಳು ಮಾಡಿದೆ. ಅಲ್ಲದೆ ಸಂಜೆಯಾಗುತ್ತಿದ್ದಂತೆ ಕಟ್ಟಡದ ಸುತ್ತಮುತ್ತ ಅಕ್ರಮ ಚಟುವಟಿಕೆಗಳು, ಮದ್ಯಪಾನ ಪ್ರಿಯರಿಗೆ ಮದ್ಯ ಸೇವಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ಮಹಿಳೆಯರು ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಭಾಗದಲ್ಲಿ ಕೂಲಿ ಕಾರ್ಮಿಕರ ಮಕ್ಕಳು ಜಾಸ್ತಿ ಇರುವುದರಿಂದ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಿಸಲು ಮನವಿ ಮಾಡಿದ ಪರಿಣಾಮ ನೂತನವಾಗಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿತ್ತಾದರೂ ಅದನ್ನು ಬಳಸದೆ ಬಾಡಿಗೆ ಕಟ್ಟಡದಲ್ಲಿ ಬಳಸಲಾಗುತ್ತಿದೆ. ಕೂಡಲೇ ಅಂಗನವಾಡಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸ್ಪಷ್ಟನೆ: ಈ ಬಗ್ಗೆ ತೊಗರಿಹಂಕಲ್ ಗ್ರಾಪಂ ಅಧ್ಯಕ್ಷ ಸುಂದರ್‌ರವರನ್ನು ದೂರವಾಣಿ ಮೂಲಕ ವಿಚಾರಿಸಿದಾಗ,ಸರಕಾರದಿಂದ ಮಂಜೂರಾದ ಕಟ್ಟಡವನ್ನು ತಾವು ಏಕಾಏಕಿ ಉದ್ಘಾಟಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಬಿಟ್ಟು ತಮ್ಮಿಷ್ಟಕ್ಕೆ ತಾವೆ ಅಧಿಕಾರ ಚಲಾಯಿಸಿದರೆ ಮುಂದೆ ತಾವು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.