ಕುಡಿಯುವ ನೀರು, ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಗ್ರಾಮಸ್ಥರ ಧರಣಿ
ಚಿಕ್ಕಮಗಳೂರು, ಮೇ 13: ಆಲ್ದೂರು ಗ್ರಾಪಂ ವ್ಯಾಪ್ತಿಯ ಗುಡ್ಡದೂರು ಗ್ರಾಮಸ್ಥರಿಗೆ ಕುಡಿಯುವ ನೀರು ಮತ್ತು ನಿವೇಶನದ ಹಕ್ಕುಪತ್ರ ನೀಡಲು ಒತ್ತಾಯಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಉಪತಹಶೀಲ್ದಾರ್ ಚೇತನ್ ರವರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಪಂ ವ್ಯಾಪ್ತಿಯ ಗುಡ್ಡದೂರು ಗ್ರಾಮದ ಗ್ರಾಮಸ್ಥರು ಹತ್ತು ಹಲವು ವರ್ಷಗಳಿಂದ ಹವ್ವಳ್ಳಿ ಗ್ರಾಮದ ಸರ್ವೆ ನಂ. 328ರಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದು, ಕುಟುಂಬಗಳು ನಿವೇಶನ ರಹಿತ ಕಾರ್ಮಿಕ ಕುಟುಂಬವಾಗಿದೆ. ಅಲ್ಲದೇ ಸರಕಾರದ ಸೌಕರ್ಯಗಳು ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ದ್ದಾರೆ. ಈ ಬಗ್ಗೆ ಗ್ರಾಪಂ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಧರಣಿ ನಿರತರು ದೂರಿದ್ದಾರೆ.
ಆಲ್ದೂರು ಗ್ರಾಪಂ ಸಭೆಯಲ್ಲಿ ಕುಡಿಯುವ ನೀರು ಒದಗಿಸಲು ನಿರ್ಣಯ ಕೈಗೊಂಡು ಅನುದಾನ ಮಂಜೂರಾಗಿದೆ. ಆದರೆ ಕುಡಿಯುವ ನೀರಿನ ಕಾಮಗಾರಿಗೆ ಅಂದಾಜು ವೆಚ್ಚ ತಯಾರಿಸಿ ಕೊಡಲು ಕಿರಿಯ ಇಂಜಿನಿಯರ್ ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ ಅಂದಾಜು ಪಟ್ಟಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಹಳ್ಳಿಯಲ್ಲಿ ಜನರು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದು, ಹಕ್ಕುಪತ್ರ ಒದಗಿಸಲು ಗ್ರಾಪಂ ನಿರ್ಣಯ ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗುಡಿಸಲು ವಾಸಿಗಳಿಗೆ ಹಕ್ಕುಪತ್ರ ಕೊಡಲು ಮುಂದಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ವಲಯ ಕಾರ್ಯದರ್ಶಿ ಹೆಡದಾಳು ಕುಮಾರ್, ಶಾಖಾ ಕಾರ್ಯದರ್ಶಿ ಎಸ್.ರವಿ ಮತ್ತಿತರರು ಉಪಸ್ಥಿತರಿದ್ದರು.