ನಮ್ಮ ದುಸ್ತರ ಬದುಕನು್ನ ಸರಕಾರ ಹಸನುಗೊಳಿಸಿದೆ’
ಬೆಂಗಳೂರು, ಮೇ 13: ‘ದುಖಾನದಲ್ಲಿ(ಅಂಗಡಿ) ದವಸ- ಧಾನ್ಯ ಕೊಳ್ಳಲು ದುಡ್ಡಿನ ಕೊರತೆಯಿಂದ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು. ಆದರೆ, ರಾಜ್ಯ ಸರಕಾರ ನಮಗೆ ನೀಡಿದ ‘ಅನ್ನಭಾಗ್ಯ ಯೋಜನೆ’ ಜಾರಿಯಿಂದ ಹಸಿದ ಹೊಟ್ಟೆ ತುಂಬಿಸಿಕೊಳ್ಳುವ ಅವಕಾಶ ಮಾಡಿ ಕೊಟ್ಟಿದೆ’ ಹೀಗೆಂದು ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯ ಬಸವರಾಜ ಮಲ್ಲನಾಯಕ ಅನ್ನಭಾಗ್ಯ ಯೋಜನೆಯ ಬಗ್ಗೆ ಮನಸ್ಸು ತುಂಬಿ ಶ್ಲಾಘಿಸುತ್ತಿದ್ದರೆ ‘ಜನ-ಮನ’ ಜನಾಭಿಪ್ರಾಯ ಸಮಾವೇಶದಲ್ಲಿ ಉಪಸ್ಥಿತರಿದ್ದ ಸಿಎಂ ಸಿದ್ದರಾಮಯ್ಯ, ಸಂಪುಟ ಸಹೊದ್ಯೋಗಿಗಳು ಸೇರಿದಂತೆ ನೆರದಿದ್ದವರಲ್ಲಿ ಸರಕಾರದ ಕಾರ್ಯವೈಖರಿಯ ಬಗ್ಗೆ ಸಂತೃಪ್ತಿಯ ಭಾವ ಮೂಡಿಸಿತು.
‘ರಾಜ್ಯ ಸರಕಾರ ಉಚಿತ ಅಕ್ಕಿ, ಗೋಧಿಯ ಜೊತೆ, ಉಪ್ಪು, ಅಡಿಗೆ ಎಣ್ಣೆ ನೀಡುತ್ತಿದೆ. ಮಾರುಕಟ್ಟೆಯಲ್ಲಿ 11ರೂ.ಗಳಿಗೆ ದೊರಕುವ ಉಪ್ಪು ನಮಗೆ ಕೇವಲ 2 ರೂ.ಗೆ, 50 ರೂ. ತಾಳೆಎಣ್ಣೆ 25ರೂ.ಗೆ ಹಾಗೂ ಮಾರುಕಟ್ಟೆಯಲ್ಲಿ 40 ರೂ.ಗಳಿರುವ ಸಕ್ಕರೆಯನ್ನು ರಾಜ್ಯ ಸರಕಾರ ಕೇವಲ 13.50ರೂ.ಗೆ ನೀಡುತ್ತಿದೆ. ಇದು ನಮ್ಮ ದುಸ್ತರ ಬದುಕನ್ನು ಹಸನುಗೊಳಿಸಿದೆ’ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ಸುಮಂಗಲಾ ಎಸ್. ಬೆಟಗೇರಿ, ನೇತ್ರಾವತಿ ಚಂದ್ರಶೇಖರ ಅನ್ನಭಾಗ್ಯ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
‘ಬೆಳಗಾಗೆದ್ದು ಮನೆಯ ಕೆಲಸ ಮುಗಿಸಿ ಒಂದು ತುತ್ತು ಉಂಡು ಶಾಲೆಗೆ ಬಂದರೆ ಮತ್ತೆ ಊಟ ಕಾಣುತ್ತಿದ್ದುದು ರಾತ್ರಿಯೇ. ಶಾಲೆಯಲ್ಲಿ ಅಪೌಷ್ಟಿಕತೆಯಿಂದಾಗಿ, ಹಸಿವಿನಿಂದಾಗಿ, ರಕ್ತ ಹೀನತೆಯಿಂದಾಗಿ ಬಳಲಿ ಹೋಗುತ್ತಿದ್ದೆವು. ಮನೆಯಲ್ಲಿ ಹಾಲು ಕೊಳ್ಳುವಷ್ಟು ಶಕ್ತರಾಗಿರಲಿಲ್ಲ. ಈಗ ವಾರದಲ್ಲಿ ಮೂರುದಿನ ಮಧ್ಯಾಹ್ನ ಶಾಲೆಯಲ್ಲಿಯೇ ಬಿಸಿ ಹಾಲು ಕೊಡುತ್ತಿದ್ದು ಮಧ್ಯಾಹ್ನದ ನಂತರ ಶಾಲೆಯಲ್ಲಿ ಉತ್ಸಾಹದಿಂದ ಪಾಠ ಕಲಿಯಲು ಅನುಕೂಲವಾಗುತ್ತಿದೆ’ ಎಂದು ಹಾವೇರಿ ಜಿಲ್ಲೆಯ ಕುರಬಗೊಂಡ ಶಾಲೆಯ ಏಳನೆ ತರಗತಿ ವಿದ್ಯಾರ್ಥಿನಿ ಕೀರ್ತಿ ಆನಂದ್ ದೊಡ್ಡಗೌಡರ್ ಅಭಿಮತ.
‘ಮೈತ್ರಿ ಯೋಜನೆ ಜಾರಿಗೆ ಬಂದಮೇಲೆ ನಾವು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಿದೆ. ಸರಕಾರ ನೀಡುತ್ತಿರುವ ಪ್ರಾಥಮಿಕ ಸೌಲಭ್ಯ ಸಂತಸ ತಂದಿದೆ ಯಾದರೂ ಇನ್ನೂ ಹೆಚ್ಚಿನ ಸೌಲಭ್ಯ ನೀಡಲಿ ಎಂಬುದು ನಮ್ಮ ಆಶಯ ಎಂದು ಮೈತ್ರಿ ಯೋಜನೆ ಫಲಾನುಭವಿಗಳಾದ ಲಿಂಗತ್ವ ಅಲ್ಪಸಂಖ್ಯಾತರಾದ ವಿಜಯಪುರದ ಸತೀಶ್ ಮತ್ತು ಶಬ್ಬೀರ್ ಅಭಿಪ್ರಾಯವಾಗಿತ್ತು.
‘ಮಳೆಯನ್ನೇ ನಂಬಿದ ರೈತ ಬರಡು ನೆಲವನ್ನು ನೋಡುತ್ತಾ ಕುಳಿತುಕೊಳ್ಳಬೇಕಾದ ದುಸ್ಥಿತಿ ಇತ್ತು. ಈ ನಿಟ್ಟಿನಲ್ಲಿ ರೈತರ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ನೀರು ಶೇಖರಿಸಿ ಜಮೀನಿನಲ್ಲಿ ಸರಾಗ ವಾಗಿ ಬೆಳೆ ತೆಗೆಯುವ ಫಲಪ್ರದ ಯೋಜನೆಯೇ ಕೃಷಿ ಹೊಂಡದ್ದು’ ಹೀಗೆಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಿರಿಗಾವ್ ಮಹ ದೇವ ಬಾಬು ಚೌಗಲೆ ಕೃಷಿಭಾಗ್ಯ ಯೋಜನೆಯನ್ನು ಶ್ಲಾಘಿಸಿದರು.
‘ಬಾಡಿಗೆ ಮನೆಗಳಲ್ಲಿ ವಾಸವಿದ್ದು ಬಾಡಿಗೆ ಕಟ್ಟಲಾಗದೆ ಸಂಕಷ್ಟದ ಲ್ಲಿದ್ದೆವು. ಇಂದು ಸರಕಾರದ ಬಸವ ವಸತಿ ಯೋಜನೆ ಮೂಲಕ ನಮಗೆ ನೆರಳಿನ ಗೂಡು ನೀಡಿದೆ’ ಎಂದು ಹಾವೇರಿ ಜಿಲ್ಲೆ ಹೊಸ ಕಿತ್ತೂರು ಗ್ರಾಮದ ಸುಜಾತಾ ಮತ್ತು ಅದೇ ಜಿಲ್ಲೆಯ ಹೊಸೂರು ಚಂದ್ರಕಲಾ ಬಸವ ವಸತಿ ಯೋಜನೆಯನ್ನು ಹೊಗಳಿದರು.
‘ಹಾಸ್ಟೆಲ್‌ನಲ್ಲಿ ಸ್ಥಳ ದೊರೆಯಲಿಲ್ಲ. ನನ್ನ ಶಿಕ್ಷಣದ ಭವಿಷ್ಯ ಚಿಂತೆ ಗೀಡು ಮಾಡಿತ್ತು. ವಿದ್ಯಾಸಿರಿ ಯೋಜನೆಯಿಂದಾಗಿ ನೆಮ್ಮದಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದೇನೆ’ ಎಂದು ವಿದ್ಯಾಸಿರಿ ಫಲಾನುಭವಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ವಿದ್ಯಾರ್ಥಿ ಆದರ್ಶ ಹಾಗೂ ಶಹಾಪೂರದ ಶಕುಂತಲಾರ ಅಭಿಮತ.
‘ಲೀಟರ್ ಹಾಲಿಗೆ ರಾಜ್ಯ ಸರಕಾರ 4 ರೂ.ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ಹೈಗಾರಿಕೆಯಲ್ಲಿ ತೊಡಗಿರುವ ರೈತ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ರಾಜ್ಯದಲ್ಲಿ ಹೈನುಗಾರಿಕೆಗೆ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಿ, ಇನ್ನೂ 2 ರೂ.ಹೆಚ್ಚಿಸಿದಲ್ಲಿ ರೈತರಿಗೆ ನೆಮ್ಮದಿ ತರುವುದು’ ಎಂದು ಕೊಪ್ಪಳದ ಮಲ್ಲಪ್ಪ ಹಿರೇಸಿಂಧೋಗಿ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನೇ ಆಗ್ರಹಿಸಿದರು.
‘ದೇವರಾಜ ಅರಸು ಹಿಂ.ವರ್ಗಗಳ ಅಭಿವೃದ್ಧಿ ನಿಗಮವು 30 ಸಾವಿರ ರೂ.ಗಳ ಸಾಲದ ನೆರವು ನೀಡಿದೆ. ನಶಿಸುತ್ತಿರುವ ಕುಂಬಾರಿಕೆ ಉಳಿಸಿ ಬೆಳೆಸುವ ಯತ್ನದಲ್ಲಿ ಸರಕಾರವು ಪ್ರೋತ್ಸಾಹ ನೀಡಿದೆ. ಅಲ್ಲದೆ, ನನಗೆ ನೀಡಿದ ಸಾಲಮನ್ನಾ ಮಾಡಿದ ಪರಿಣಾಮವಾಗಿ ಇಂದು ನಾನು ಹೆಚ್ಚು ಅಭಿವೃದ್ಧಿ ಸಾಧಿಸಿದ್ದೇನೆ’ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡಿನ ಶಿವಾನಂದ ಕುಂಬಾರ ಸ್ಪಷ್ಟಪಡಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಹಿಟಗಿ ಗ್ರಾಮದ ಹಿಟ್ಟಪ್ಪ ಅಜ್ಜಪ್ಪ ತಳವಾರ ಪದವೀಧರನಾಗಿದ್ದು, ನಿರುದ್ಯೋಗ ಸಮಸ್ಯೆಯಲ್ಲಿದ್ದರು. ಇವರು ಡಾ.ಬಿ. ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೋಳಿ ಸಾಕಾಣಿಕೆಗಾಗಿ ಸಾಲ ಪಡೆದಿದ್ದು ಅಭಿವೃಧ್ಧಿ ಪಥದಲ್ಲಿದ್ದಾಗಲೇ ಸಾಲಮನ್ನಾ ಆಯಿತು ಎಂದು ನುಡಿದರು.
‘ಶ್ರಮ ಶಕ್ತಿ ಯೋಜನೆಯಡಿ ಕುಶಲ ಕರ್ಮಿಯಾಗಿ ತಲೆ ತಲಾಂತರದಿಂದ ಬಂದಿದ್ದ ಕ್ಷೌರಿಕ ವೃತ್ತಿಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಲು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 30 ಸಾವಿರ ರೂ. ಸಾಲ ಪಡೆದು ಈಗ ಅಭಿವೃದ್ಧಿ ಹೊಂದಿದ್ದಾರೆ. ಸಾಲವು ಮನ್ನಾವಾಗಿದೆ’ ಎಂದು ಗದಗದ ವೆಂಕಟೇಶ್ ತಿಪ್ಪಣ್ಣ ರಾಂಪೂರ ಹೇಳುವ ವೇಳೆ ಅವರ ಮುಖದಲ್ಲಿ ಸಂತಸದ ನಗು ದುದ್ದ ಕಾಣುತ್ತಿತ್ತು.