ಸಿಎಂ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಮೇ 13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸಿದ್ದ ವಿವಾದಿತ ದುಬಾರಿ ಕೈ-ಗಡಿಯಾರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯ ನಿರ್ವಾಹಕ ಇಂಜಿನಿ ಯರ್ ಎಲ್.ರಘು ಎಂಬಾತ ನೀಡಿರುವು ದಾಗಿ ಆರೋಪಿಸಿ ಭ್ರಷ್ಟಾಚಾರ ವಿರೋಧಿ ಹಾಗೂ ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ.ಅಬ್ರಾಹಂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಶುಕ್ರವಾರ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ವಾಚಿನ ವಿರುದ್ಧ ದೂರು ಸಲ್ಲಿಸಿ ಬಳಿಕ ಎಸಿಬಿ ಕೇಂದ್ರ ಕಚೇರಿ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚಿನ ಪ್ರಕರಣದ ಬೆಳಕಿಗೆ ಬಂದಾಗ ನನ್ನ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮ ಅವರಿಂದ 2015ರ ಜುಲೈನಲ್ಲಿ ಉಡುಗೊರೆಯಾಗಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಇದು ಸುಳ್ಳಾಗಿದ್ದು, ಬಿಡಿಎನಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಎಲ್.ರಘು ಅವರಿಂದ ಈ ವಾಚನ್ನು ಸಿಎಂ ಪಡೆದಿದ್ದಾರೆ ಎಂದು ಆರೋಪಿಸಿದರು.
ಹಿಂದಿನ ಸಾಲಿನ ನವೆಂಬರ್‌ನ ಮೊದಲ ವಾರದಲ್ಲಿ ಕರ್ನಾ ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಹಾಗೂ ರಘು ಬೆಂಗಳೂರಿನ ನ್ಯಾಷನಲ್ ಮಾರುಕಟ್ಟೆಯಲ್ಲಿ ತಲಾ 45 ಲಕ್ಷರೂ.ಗಳಂತೆ ಮೂರು ವಾಚನ್ನು ಖರೀದಿ ಮಾಡಿದ್ದು, ಒಂದು ವಾಚನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದ್ದಾರೆ. ಇನ್ನೊಂದು ವಾಚನ್ನು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ನೀಡಲಾಗಿದೆ. ಇನ್ನು ಉಳಿದ ಒಂದು ವಾಚನ್ನು ರಘು ಅವರೇಇಟ್ಟುಕೊಂಡಿದ್ದಾರೆ. ಈ ದುಬಾರಿ ವಾಚು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಡಾ.ಗಿರೀಶ್‌ಚಂದ್ರ ವರ್ಮ ಅವರನ್ನು ಎಳೆತರಲಾಗಿದೆ. ಅಲ್ಲದೆ, ಇವರು ಸಚಿವ ಎಚ್.ಸಿ.ಮಹದೇವಪ್ಪ ಅವರ ಆತ್ಮೀಯ ಗೆಳೆಯರು ಎಂದು ದೂರಿದರು.
ಭ್ರಷ್ಟ ಇಂಜಿನಿಯರ್ ಎಲ್.ರಘು ಅವರನ್ನು ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಈ ವಾಚು ಉಡುಗೊರೆಯಾಗಿ ಪಡೆದಿದ್ದಾರೆ ಎಂದ ಅವರು, ಈ ಬಗ್ಗೆ ಸೂಕ್ತ ತನಿಖೆಯಾಗುವ ಜೊತೆಗೆ ದುಬಾರಿ ವಾಚಿನ ಹಿಂದಿನ ಮುಖವಾಡಗಳು ಹೊರ ಬರಬೇಕೆಂದು ಆಗ್ರಹಿಸಿದರು.