×
Ad

ಹದಿನೈದು ಜೀತುದಾಳುಗಳ ರಕ್ಷಣೆ

Update: 2016-05-13 23:37 IST

ಬೆಂಗಳೂರು, ಮೇ 13: ಐದರಿಂದ ಎಂಟರ ಹರೆಯದ ನಾಲ್ಕು ಬಾಲ ಕಾರ್ಮಿಕರ ಸಹಿತ ಮಾನವ ಕಳ್ಳಸಾಗಣೆಗೆ ತುತ್ತಾಗಿ ಜೀತದಾಳುಗಳಾಗಿ ದುಡಿಯುತ್ತಿದ್ದ ಹದಿನೈದು ಕಾರ್ಮಿಕರನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ ಇಟ್ಟಿಗೆ ಕಾರ್ಖಾನೆಯೊಂದರಿಂದ ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಇಂಟರ್‌ನ್ಯಾಷನಲ್ ಜಸ್ಟೀಸ್ ಮಿಶನ್ (ಐಜೆಎಂ) ರಕ್ಷಿಸಿದೆ. ಶೋಷಿತರು ಐದು ಕುಟುಂಬಕ್ಕೆ ಸೇರಿದವರಾಗಿದ್ದು, ಮೂರು ಹಸುಳೆಗಳ ಸಹಿತ ಒಟ್ಟಾರೆ 18 ಮಂದಿಯನ್ನು ಮೂರರಿಂದ ಏಳು ವರ್ಷಗಳ ತನಕ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಡಿ ಹಾಕಲಾಗಿತ್ತು.

ಇಟ್ಟಿಗೆ ಕಾರ್ಖಾನೆಯ ಮೇಲ್ವಿಚಾರಕನನ್ನು ಬಂಧಿಸಲಾಗಿದ್ದು, ಮಾಲಕ ತಲೆಮರೆಸಿಕೊಂಡಿದ್ದಾನೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐಪಿಸಿ 370(ಮಾನವ ಕಳ್ಳಸಾಗಣೆ), ಜೀತಪದ್ಧತಿ(ನಿರ್ಮೂಲನೆ) ಕಾಯ್ದೆ, 1976ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ರಕ್ಷಿಸಲಾದ ಐದು ಕುಟುಂಬಗಳಲ್ಲಿ, ಮೂರು ಕುಟುಂಬಗಳನ್ನು ಒಡಿಶಾದಿಂದ ಏಜೆಂಟ್‌ಗಳ ಮೂಲಕ ಇಟ್ಟಿಗೆ ಕಾರ್ಖಾನೆಗೆ ಕಳ್ಳಸಾಗಣೆ ಮಾಡಲಾಗಿದೆ. ಇದೇ ವೇಳೆ ಇತರೆ ಎರಡು ಕುಟುಂಬಗಳು ಕೆಲಸ ಹುಡುಕಿಕೊಂಡು ತಾವೇ ಬಂದಿವೆ. ಕಳ್ಳಸಾಗಣೆಗೊಳಗಾದ ಕುಟುಂಬಗಳ ಪೈಕಿ ಒಂದು ಕುಟುಂಬ ಏಳು ವರ್ಷಗಳಿಂದ ದುಡಿಯುತ್ತಿದ್ದರೆ, ಇತರೆ ಎರಡು ಕುಟುಂಬಗಳು ಐದು ವರ್ಷಗಳಿಂದ ಜೀತಕ್ಕೆ ತುತ್ತಾಗಿವೆ.

ತಾವಾಗಿಯೇ ಬಂದ ಎರಡು ಕುಟುಂಬಗಳು ಇಟ್ಟಿಗೆ ಕಾರ್ಖಾನೆಯಲ್ಲಿ ಮೂರು ವರ್ಷಗಳಿಂದ ದುಡಿಯುತ್ತಿವೆ. ಯಾವುದೇ ಕುಟುಂಬಗಳನ್ನು ಒಟ್ಟಾಗಿ ಇಟ್ಟಿಗೆ ಕಾರ್ಖಾನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಹೆಚ್ಚಾಗಿ ಪುರುಷ ಕಾರ್ಮಿಕರನ್ನಷ್ಟೇ ರವಿವಾರ ಸಂಜೆ ಹೊತ್ತಲ್ಲಿ ಅವರ ವಾರದ ಪಾವತಿಯಾದ ಬಳಿಕ ಕುಟುಂಬದ ದಿನಸಿ ಖರೀದಿಸುವ ಸಲುವಾಗಿ ಮಾರುಕಟ್ಟೆಗೆ ಹೋಗಲು ಮಾತ್ರ ಬಿಡಲಾಗುತ್ತಿತ್ತು.

ದಂಪತಿಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದ ವೇಳೆ ಅವರ ಮಕ್ಕಳನ್ನು ಬಿಡುತ್ತಿರಲಿಲ್ಲ. ಹೆಚ್ಚಾಗಿ ಮಾರುಕಟ್ಟೆಗೆ ಹೋಗುವ ವೇಳೆ ಮೇಲ್ವಿಚಾರಕ ಜೊತೆಗೆ ಇದ್ದು, ನಿಗಾ ಇಡುತ್ತಿದ್ದ. ಅಷ್ಟೆ ಅಲ್ಲ, ಕಾರ್ಖಾನೆಯೊಳಗೆ ಕೂಡಾ ರಾತ್ರಿ ವೇಳೆಯಲ್ಲಿ ಪರಾರಿಯಾಗದಂತೆ ಕಾವಲು ಕಾಯಲಾಗುತ್ತಿತ್ತು. ಮೂರು ಮಕ್ಕಳ ತಂದೆಯಾಗಿರುವ ಅಂಕಿತ್‌ನನ್ನು ಮಾಲಕನ ಸೂಚನೆ ಮೇರೆಗೆ ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಕರೆತರುವಾಗ ಕಳ್ಳಸಾಗಣೆದಾರರು ಆತನಿಗೆ ಉತ್ತಮ ವೇತನ ಮತ್ತು ಮನೆ ನೀಡುವುದಾಗಿ ಸುಳ್ಳು ಹೇಳಿದ್ದರು.

‘‘ಇಟ್ಟಿಗೆ ಕಾರ್ಖಾನೆಯಲ್ಲಿ ನಾನು ಕೆಲಸ ಮಾಡಲು ಆರಂಭಿಸಿದ ನಂತರ, ನನ್ನನ್ನು ಬೆಂಗಳೂರಿಗೆ ಕರೆತಂದ ಸರ್ದಾರ್(ಏಜೆಂಟ್) ನನ್ನ ಹೆಸರಲ್ಲಿ 40 ಸಾವಿರ ರೂ.ತೆಗೆದುಕೊಂಡಿದ್ದಾನೆ ಎಂದು ಮಾಲಕ ನನಗೆ ಹೇಳಿದ. ಆತನ ಸಾಲ ತೀರಿಸಲು ನಾನು ಹಾಗೂ ನನ್ನ ಕುಟುಂಬ ದುಡಿಯಬೇಕು ಅಥವಾ ನಾವು ತೆರಳಲು ಬಯಸುವುದಾದರೆ 40 ಸಾವಿರ ರೂ.ಆತನಿಗೆ ಪಾವತಿಸಬೇಕು ಎಂದು ಹೇಳಿದ. ಸಾಲ ತೀರುವ ಮುನ್ನ ಈ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೆ ನನ್ನ ಕಾಲು ಮುರಿಯುವುದಾಗಿ ಆತ ಬೆದರಿಸಿದ್ದ ’’ ಎಂದು ಅಂಕಿತ್ ತನ್ನ ಕಥೆ ವಿವರಿಸುತ್ತಾನೆ.

ಒಂದು ವರ್ಷದ ಹಿಂದೆ ಮಾವ ತೀರಿಕೊಂಡಾಗ ಅಂಕಿತ್ ಹಾಗೂ ಆತನ ಪತ್ನಿಗೆ ಮರಳಿ ಒಡಿಶಾಕ್ಕೆ ಹೋಗಲೇಬೇಕಾಗಿತ್ತು. ಅವರ ಮೂವರು ಪುಟ್ಟ ಮಕ್ಕಳನ್ನು ಶ್ಯೂರಿಟಿಯಂತೆ ತನ್ನ ಬಳಿ ಬಲಾತ್ಕಾರದಿಂದ ಇಟ್ಟುಕೊಂಡ ಬಳಿಕವಷ್ಟೆ ಮಾಲಕ ಈ ದಂಪತಿಯನ್ನು ಕಳುಹಿಸಲು ಒಪ್ಪಿದ್ದ. ಹೀಗಾಗಿ, ಇತರೆ ಕಾರ್ಮಿಕರ ಜೊತೆ ತಮ್ಮ ಮಕ್ಕಳನ್ನು ಬಿಟ್ಟು ಇವರು ತೆರಳಿ ಒಡಿಶಾದಲ್ಲಿ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಐದೇ ದಿನಗಳಲ್ಲಿ ಕೆಲಸಕ್ಕೆ ಮರಳಿದ್ದರು. ಈ ಪ್ರಯಾಣ ಹಾಗೂ ಅಂತಿಮ ಸಂಸ್ಕಾರದ ಖರ್ಚಿಗಾಗಿ ಮಾಲಕನಿಂದ 5 ಸಾವಿರ ರೂ.ಸಾಲ ಪಡೆದಿದ್ದರು.

ಹೀಗಾಗಿ, ಮತ್ತೆ ಆತನ ಪಾಶದಲ್ಲಿ ಮುಂದುವರಿದರು. ಇಡೀ ಕುಟುಂಬವನ್ನೇ ಒತ್ತು ಇಟ್ಟುಕೊಳ್ಳುವ, ದುಡಿಸಿಕೊಳ್ಳುವ ಜೀತ ಕಾರ್ಮಿಕ, ಮಾನವ ಕಳ್ಳಸಾಗಣೆಯಂತಹ ಸಂಘಟಿತ ಅಪರಾಧವು ಒಂದು ದಿನ ಕೊನೆಗೊಳ್ಳಲೇಬೇಕಾಗಿದೆ ಎಂದು ಹೇಳುತ್ತಾರೆ ಈಸ್ತರ್ ಡೇನಿಯಲ್, ಐಜೆಎಂನ ಜಸ್ಟೀಸ್ ಸಿಸ್ಟಮ್ ಎಂಗೇಜ್‌ಮೆಂಟ್‌ನ ನಿರ್ದೇಶಕರು. ಕನಿಷ್ಠ ಏಳು ವರ್ಷಗಳ ಶಿಕ್ಷೆಯೊಂದಿಗೆ ಜಾಮೀನು ರಹಿತ ಅಪರಾಧವಾಗಿರುವ ಐಪಿಸಿಯ ಸೆಕ್ಷನ್ 370 ಮೂಲಕ, ಈ ಅಪರಾಧವನ್ನು ನಿಗ್ರಹಿಸಲು ಬಲಿಷ್ಠವಾದ ಕಾನೂನು ಹೊಂದಿದ್ದು, ಈಗ ನಮಗೆ ಬೇಕಾಗಿರುವುದು, ಸಂತ್ರಸ್ತರ ಗುರುತಿಸುವಿಕೆ, ರಕ್ಷಣೆ ಮತ್ತು ಪುನರ್ವಸತಿ ಹಾಗೂ ಅಪರಾಧಿಗಳ ಬಂಧನ ಮತ್ತು ಕಾನೂನು ಕ್ರಮ ಕೈಗೊಳ್ಳುವಿಕೆಗಾಗಿ ವಿವಿಧ ಇಲಾಖೆಗಳು ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ಆರಂಭದಲ್ಲಿ ಕಾರ್ಮಿಕರಿಗೆ 1 ಸಾವಿರ ಇಟ್ಟಿಗೆ ತಯಾರಿಸಿದ್ದಕ್ಕೆ 200 ರೂ.ಪಾವತಿಸುವುದಾಗಿ ಭರವಸೆ ನೀಡಿದ್ದ. ಅಷ್ಟನ್ನು ಸಾಮಾನ್ಯವಾಗಿ ಪತಿ ಪತ್ನಿ ಒಟ್ಟಾಗಿ ದಿನವೊಂದಕ್ಕೆ ಮಾಡುತ್ತಾರೆ. ಇಟ್ಟಿಗೆ ಕಾರ್ಮಿಕರೊಬ್ಬರ ಕನಿಷ್ಠ ದಿನಗೂಲಿ ದಿನಕ್ಕೆ 258 ರೂ.ಇದ್ದಾಗ್ಯೂ ಗಂಡ ಮತ್ತು ಹೆಂಡತಿಗೆ ಒಟ್ಟಾಗಿ ವಾರಕ್ಕೆ ಕೇವಲ 400 ರೂ.ಪಾವತಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News