ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ಗೂಂಡಾಗಿರಿಯ ದೃಶ್ಯಗಳು: ಜೈಲುಪಾಲಾದ ನಾಲ್ವರು ಆರೋಪಿಗಳು!
ಶಿವಮೊಗ್ಗ, ಮೇ 14: ನಗರದ ಬಾರ್‌ವೊಂದರ ಮುಂಭಾಗ, ಹಾಡಹಗಲೇ ಯುವಕನೋರ್ವನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ಪೊಲೀಸ್ ತಂಡ ಶನಿವಾರ ಹರಿಗೆ ಬಡಾವಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅರುಣ್ (24), ನವೀನ್ (25), ಯತೀಶ್ (28) ಹಾಗೂ ವಿನಯ್(21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರೆಲ್ಲರೂ ಹರಿಗೆ ಬಡಾವಣೆಯ ನಿವಾಸಿಗಳಾಗಿದ್ದು, ಪೈಟಿಂಗ್ ಹಾಗೂ ಗಾರೆ ಕೆಲಸ ಮಾಡುವವರಾಗಿದ್ದಾರೆ. ಅದೇ ಬಡಾವಣೆಯಲ್ಲಿ ಆರೋಪಿಗಳೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ನಡೆಸಿದ ಆರೋಪದಡಿ ಕೇಸ್ ದಾಖಲಾಗಿದೆ.
ಘಟನೆ ಹಿನ್ನೆಲೆ
ಇತ್ತೀಚೆಗೆ ಬಿ.ಎಚ್.ರಸ್ತೆಯ ಮಾಡರ್ನ್ ಚಿತ್ರಮಂದಿರ ಸಮೀಪವಿರುವ ಬ್ಲೂ ಸ್ಟಾರ್ ಬಾರ್ ಮುಂಭಾಗ ಬಂಧಿತ ನಾಲ್ವರು ಆರೋಪಿಗಳು ಯುವಕನೋರ್ವನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಆರೋಪಿಗಳು ನಡೆಸಿದ ಗೂಂಡಾಗಿರಿಯ ದೃಶ್ಯಗಳು ಬಾರ್ ಮುಂಭಾಗ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹಲ್ಲೆಗೀಡಾದ ವ್ಯಕ್ತಿಯು ಈ ಕುರಿತಂತೆ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ.
ಮತ್ತೊಂದೆಡೆ ಬಾರ್‌ನವರು ಘಟನೆಯ ಬಗ್ಗೆ ದೊಡ್ಡಪೇಟೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್‌ರವರಿಗೆ ಮಾಹಿತಿಯಿತ್ತಿದ್ದರು. ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಯ ಸಂಗ್ರಹ ನೀಡಿದ್ದರು. ಸಿ.ಸಿ.ಕ್ಯಾಮರಾದಲ್ಲಿನ ದೃಶ್ಯಾವಳಿಯ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ಪೊಲೀಸ್ ತಂಡ, ಎಲ್ಲ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಆರೋಪಿಗಳಿಂದ ಹಲ್ಲೆಗೀಡಾದ ಯುವಕನ ಪೂರ್ವಾಪರ ತಿಳಿದುಬಂದಿಲ್ಲ.
ಆತನ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ. ಹಿಂದೆಯೂ ನಡೆದಿತ್ತು: ಇದೇ ಬಾರ್ ಮುಂಭಾಗ ಈ ಹಿಂದೆ ಇದೇ ಮಾದರಿಯ ಗೂಂಡಾಗಿರಿ ಪ್ರಕರಣವೊಂದು ವರದಿಯಾಗಿತ್ತು. ಗುಂಪೊಂದು ಯುವಕನೋರ್ವನನ್ನು ಅಟ್ಟಾಡಿಸಿ ಹೊಡೆದಿತ್ತು. ಈ ದೃಶ್ಯ ಬಾರ್ ಮುಂಭಾಗದ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಯ ಆಧಾರದ ಮೇಲೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಆರೋಪಿಗಳನ್ನು ಬಂಧಿಸಿ ಜೈಲ್‌ಗೆ ಕಳುಹಿಸಿದ್ದರು.