ಸರಕಾರದ ಯೋಜನೆ ಕಾರ್ಮಿಕರಿಗೆ ತಲುಪಲಿ: ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ
ಚಿಕ್ಕಮಗಳೂರು, ಮೇ 14: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳ ಮಾಹಿತಿಯನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳು ಕಾರ್ಮಿಕರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿಸ್ವಾಮಿ ಸಲಹೆ ಮಾಡಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ ಮಾಸಿಕ ಪಿಂಚಣಿ ಮಂಜೂರಾತಿ ಪತ್ರವನ್ನು ವಯೋವೃದ್ಧ ಕಾರ್ಮಿಕರಿಗೆ ವಿತರಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶೈಕ್ಷಣಿಕ ಮತ್ತು ವೈವಾಹಿಕ ಹಾಗೂ ಶಸ್ತ್ರಚಿಕಿತ್ಸೆಗೆ ನೆರವು, ಅಪಘಾತ ಪರಿಹಾರ ಸೇರಿದಂತೆ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ ಪ್ರಚಾರದ ಕೊರತೆ ಯಿಂದಾಗಿ ಅವುಗಳ ಬಗ್ಗೆ ಕಾರ್ಮಿಕರಿಗೆ ತಿಳಿದಿಲ್ಲ ಎಂದ ಅವರು, ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ವ್ಯಾಪಕ ಪ್ರಚಾರ ನೀಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ.ತಮ್ಮಣ್ಣ ಪ್ರಾಸ್ತಾವಿಕವಾಗಿ ಮಾ ನಾಡಿ, ವಯೋವೃದ್ಧ ಕಾರ್ಮಿಕರಿಗೆ ಮಾಸಿಕ ಪಿಂಚಣಿ ನೀಡುವ ನೂತನ ಯೋಜನೆಯನ್ನು ರಾಜ್ಯ ಸರಕಾರ ಇಂದಿನಿಂದ ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯಡಿ ವಯೋವೃದ್ಧ ಕಾರ್ಮಿಕರಿಗೆ ಪ್ರತಿ ತಿಂಗಳೂ ಸಾವಿರ ರೂ. ಪಿಂಚಣಿ ದೊರೆಯಲಿದೆ. ನೂತನ ಯೋಜನೆಗೆ ಈಗಾಗಲೇ ಜಿಲ್ಲೆಯಲ್ಲಿ 18,856 ಕಾರ್ಮಿಕರು ತಮ್ಮ ಹೆಸರನ್ನು ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದರು. ವಾರ್ತಾಧಿಕಾರಿ ಮಂಜುನಾಥ್, ಹಿರಿಯ ಕಾರ್ಮಿಕ ನಿರೀಕ್ಷಕಿ ವೀಣಾಮಾಸ್ತಿ, ಕಾರ್ಮಿಕ ನಿರೀಕ್ಷಕಿ ಶಶಿಕಲಾ, ಕಾರ್ಮಿಕ ಅಧಿಕಾರಿ ಪಿ.ಯತಿರಾಜ್, ಕಾರ್ಯ ನಿರ್ವಾಹಕರಾದ ಸಿ.ಕೆ.ರಾಘವೇಂದ್ರ ಮುಹಮ್ಮದ್ ಹಾರಿಸ್ ಉಪಸ್ಥಿತರಿದ್ದರು.